ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕನ್ನಡಿಗರಿಗಿಂತ ಅನ್ಯ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ. ಹೀಗಾಗಿ ಆಗಾಗ ಗಲಾಟೆಗಳು ಕೂಡ ನಡೆಯುತ್ತಿರುತ್ತವೆ. ಹೀಗಾಗಿ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ (Kannada Development Authority) ಮುಂದಾಗಿದೆ.
ಕನ್ನಡ ಉಳಿಸಿ, ಬೆಳೆಸುವ ಪ್ರಯತ್ನಕ್ಕೆ ಬಿಬಿಎಂಪಿ ಹಾಗೂ ಕನ್ನಡ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮಹತ್ವದ ತೀರ್ಮಾನವನ್ನು ಪಾಲಿಕೆ ಮತ್ತು ಕನ್ನಡ ಪ್ರಾಧಿಕಾರ ತೆಗೆದುಕೊಂಡಿದೆ.
ವಾರಕ್ಕೆ ಮೂರು ದಿನ ಒಂದೊಂದು ಗಂಟೆಯಂತೆ, ತಿಂಗಳಿಗೆ 36 ಘಂಟೆಗಳ ಕಾಲ ಕನ್ನಡ ಕಲಿಸಲು ಚಿಂತನೆ ನಡೆದಿದೆ. ಪ್ರತಿನಿತ್ಯ ಬಳಸುವ ಕನ್ನಡ ಪದಗಳು, ವಾಕ್ಯಗಳನ್ನು ಸರಳವಾಗಿ ಹೇಳಿಕೊಡಲಾಗುತ್ತದೆ. ಇದಕ್ಕಾಗಿ 75 ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಪಾಲಿಕೆ ಮುಂದಾಗಿದೆ.
ಕಂಪನಿ, ಸಂಘ- ಸಂಸ್ಥೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕೆಲಸ ಮಾಡುವವರು ಕನ್ನಡ ಕಲಿಯಲು ಆಸಕ್ತಿ ತೋರಿದರೆ ಹಾಗೂ 30 ಜನರ ತಂಡ ಕನ್ನಡ ಕಲಿಸುವಂತೆ ಮನವಿ ಮಾಡಿದರೆ, ಆ ಜಾಗಕ್ಕೂ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದೆ.