ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ, ಹಳೇ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ತವ್ಯಕ್ಕೆ ಗೈರಾಗುವುದರೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಂಕಷ್ಟವೊಂದು ಶುರುವಾಗಿದೆ.
ಈ ಹಿನ್ನೆಲೆಯಲ್ಲಿ ಮನವೊಲಿಕೆಯ ಕಾರ್ಯ ಶುರುವಾಗಿದೆ. ಈ ಜಗಳದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯಾರಿಗೂ ಎಂದಿಗೂ ಮೋಸ ಮಾಡಿಲ್ಲ. ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ನೌಕರಸ್ಥರಿಗೆ ಹೇಳಿದ್ದಾರೆ.

ತುಮಕೂರಿನ ಎಂಪ್ರೆಸ್ ಸಭಾಂಗಣದಲ್ಲಿ ವಿಪ ಸದಸ್ಯ ಡಿ.ಟಿ. ಶ್ರೀನಿವಾಸ್ ಅಭಿಮಾನಿ ಬಳಗ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. ಅಲ್ಲದೇ, ಈ ಮೂಲಕ ನೌಕರಸ್ಥರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. 6ನೇ ವೇತನ ಆಯೋಗ ಜಾರಿಗೆ ತಂದಿದ್ದು ಕೂಡ ಕಾಂಗ್ರೆಸ್ ಸರ್ಕಾರವೇ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ 18 ಸಾವಿರ ಕೋಟಿ ಹಾಗೂ ಒಪಿಎಸ್ ಜಾರಿಗೆ ನೂರಾರು ಕೋಟಿ ರೂ. ಅವಶ್ಯವಿದೆ. ಹೀಗಾಗಿ ಯಾವುದೇ ಸರ್ಕಾರಕ್ಕೂ ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲ.
ಹೀಗಾಗಿಯೇ ನೌಕರಸ್ಥರು ತಾಳ್ಮೆಯಿಂದ ಇರಬೇಕು. ತಾಳ್ಮೆಯಿಂದ ನಿಮ್ಮ ಕೆಲಸ ನೀವು ಮಾಡಿಕೊಂಡು ಹೊರಟರೆ, ನಮ್ಮ ಸರ್ಕಾರ ನಿಮ್ಮ ಭರವಸೆಯನ್ನು ಈಡೇರಿಸಿಯೇ ಈಡೇರಿಸುತ್ತದೆ. ಕಾಂಗ್ರೆಸ್ ಸರ್ಕಾರ ಬಿಟ್ಟರೆ ಬೇರೆ ಯಾವ ಸರ್ಕಾರದಿಂದಲೂ ನಿಮ್ಮ ಭರವಸೆ ಈಡೇರಿಸಲು ಸಾಧ್ಯವಿಲ್ಲ. 6ನೇ ವೇತನ ಆಯೋಗ ಜಾರಿಯಾಗಿದ್ದೆ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ತೆರಿಗೆ ಕಟ್ಟುತ್ತಿವೆ. ಇದಕ್ಕೆ ಅನುಗುಣವಾಗಿ ನಮಗೆ ಮರಳಿ ಬರುತ್ತಿಲ್ಲ. ಹೀಗಾಗಿಯೇ ನಾವು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿ ಗಮನ ಸಳೆಯುವ ಯತ್ನ ಮಾಡಿದ್ದೇವೆ. ನಮ್ಮ ತೆರಿಗೆ ನಮಗೆ ಮರಳಿ ಬರಬೇಕು ಎಂದು ವಾದವನ್ನು ಕೇಂದ್ರದ ಮುಂದಿಟ್ಟಿದ್ದೇವೆ. ನಮ್ಮಲ್ಲಾದ ಬದಲಾವಣೆಯಿಂದ ಕರ್ನಾಟಕ ಶಕ್ತಿಯುತವಾಗಿದ್ದು, ಇತರೆ ರಾಜ್ಯಗಳಿಗೂ ಶಕ್ತಿ ನೀಡಲು ಈ ಹಣ ಬಳಕೆ ಮಾಡುತ್ತಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿದೆ. ನಮ್ಮ ರಾಜ್ಯ ಪ್ರಗತಿ ಪಥದಲ್ಲಿದೆ ಎಂಬುದು ಇದರ ಧ್ಯೋತಕ ಎಂದು ಹೇಳಿದ್ದಾರೆ.
ಅನುದಾನಿತ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧಿಸಿದಂತೆ ಸರ್ಕಾರವೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ನಿರ್ಧಾರಕ್ಕೂ ಶಿಘ್ರದಲ್ಲಿಯೇ ಬರಲಿದೆ. ನಾನು ಕೂಡ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಗೌರವಧನ ಸಾಕಾಗುವುದಿಲ್ಲ. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಒಪಿಎಸ್ ಜಾರಿಗೆ ಕ್ರಮ ವಹಿಸುತ್ತೇವೆ ಎಂದರು.ಈ ಮೂಲಕ ರಾಜ್ಯ ಸರ್ಕಾರವು ನೌಕರಸ್ಥರ ಮನವೊಲಿಕೆಗೆ ಮುಂದಾಗಿದೆ.

ಕರ್ತವ್ಯಕ್ಕೆ ಗೈರಾಗುವುದರೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಈಗಾಗಲೇ ಸರ್ಕಾರಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಹೇಳಿದ್ದಾರೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಎಲ್ಲ 6 ಲಕ್ಷ ಸರ್ಕಾರಿ ನೌಕರರೂ ಮುಷ್ಕರಕ್ಕೆ ಇಳಿಯಬೇಕು. ಅಮಾನತು, ವಜಾ, ಎಸ್ಮಾ ಜಾರಿ ಸೇರಿದಂತೆ ಯಾವುದೇ ಒತ್ತಡ, ಬೆದರಿಕೆಗೂ ಬಗ್ಗದೆ ಕರ್ತವ್ಯವನ್ನು ಬಹಿಷ್ಕರಿಸಿ ಚಳವಳಿ ನಡೆಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ. ಇದು ಈಗ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾದರೆ, ವಿರೋಧ ಪಕ್ಷಗಳಿಗೆ ಮೃಷ್ಟಾನ ಬೋಜನವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣದೊಂದಿಗೆ ಆಂತರಿಕ ಕಚ್ಚಾಟದಲ್ಲಿದೆ. ಇದರ ಮಧ್ಯೆ ಈಗ ನೌಕರರ ಮುಷ್ಕರ ಮತ್ತಷ್ಟು ತಲೆನೋವು ತಂದಂತಾಗುತ್ತಿದೆ.
ಹೋರಾಟದ ಮೊದಲ ಹಂತವಾಗಿ ಜುಲೈ 8ರಿಂದ 14ರವರೆಗೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಸುವುದು. ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಸ್ಪಂದಿಸದಿದ್ದಲ್ಲಿ ಈ ತಿಂಗಳ ಕೊನೆಯಲ್ಲಿ ಅಥವಾ ಆಗಸ್ಟ್ ಆರಂಭದಿಂದಲೇ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು ನೌಕರರ ಸಂಘ ತೀರ್ಮಾನಿಸಿದೆ. ಆದರೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ. ವಿರೋಧ ಪಕ್ಷದವರ ನಡೆ ಏನು? ಇದು ಕೇವಲ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತದೆಯಾ ಅಥವಾ ನಿಜವಾಗಿಯೂ ದೊಡ್ಡ ಸ್ವರೂಪ ಪಡೆದುಕೊಳ್ಳಲಿದೆಯಾ ಕಾಯ್ದು ನೋಡಬೇಕಿದೆ.