ತುಮಕೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಹಾಗೂ ಜೆಡಿಎಸ್ ನಿರ್ಧರಿಸಿವೆ.
ತುಮಕೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಫಲಾನುಭವಿಗಳಿಗೆ ಸವಲತ್ತು ವಿತರಣೆ ವಿವಿಧ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಡಿ. 2ರಂದು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಪ್ಪು ಬಾವುಟಕ್ಕೆ ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸುರೇಶ್ ಗೌಡ, ಕರ್ನಾಟಕದ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಹೀಗಾಗಿ ನಾವು ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ನಮಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸ್ ಬಲ ಬಳಸಿದರೆ, ಸಾವಿರಾರು ಜನ ಕಾರ್ಯಕರ್ತರೊಂದಿಗೆ ಕಪ್ಪು ಭಾವುಟ ಪ್ರದರ್ಶಿಸುತ್ತೇವೆ ಎಂದಿದ್ದಾರೆ.
ತುಮಕೂರಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಈ ಸರ್ಕಾರ ಬಂದ ಮೇಲೆ ವಿರೋಧ ಪಕ್ಷಗಳಿಗೆ ಸಾಕಷ್ಟು ತಾರತಮ್ಯ ಮಾಡಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ವಿಶೇಷ ಅನುದಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದರೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಎಂದು ಬಿಡುಗಡೆ ಮಾಡಲಾಗಿದೆ. ಶಿರಾ ಕ್ಷೇತ್ರಕ್ಕೆ 8 ಕೋಟಿ, ಕೊರಟಗೆರೆ 10 ಕೋಟಿ, ಪಾವಗಡಕ್ಕೆ 12 ಕೋಟಿ ರೂ, ಗುಬ್ಬಿ ಕ್ಷೇತ್ರಕ್ಕೆ 5 ಕೋಟಿ, ತಿಪಟೂರು ಕ್ಷೇತ್ರಕ್ಕೆ 10 ಕೋಟಿ, ಕುಣಿಗಲ್ ಕ್ಷೇತ್ರಕ್ಕೆ 42 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಆರೋಪಿಸಿದ್ದಾರೆ.
ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷ, ದುರಂಹಕಾರ ರಾಜಕಾರಣ ಹೆಚ್ಚಾಗಿದೆ. ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಬಿಟ್ಟಿ ಭಾಗ್ಯದ ಅಡಿಯಲ್ಲಿ ಈ ಸರ್ಕಾರ ನಡೆಸುತ್ತಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.