ಬೆಂಗಳೂರು: ಬಿಜೆಪಿ ಅವಧಿಯಲ್ಲಿದ್ದ 21 ಗೋಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಗೋಹತ್ಯೆಗೆ ಪ್ರಚೋದನೆ ನೀಡಲು ಗೋಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಮಾಜಿ ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭರ್ತಿಯಾಗಿದ್ದ ಗೋಶಾಲೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಏಕೆ ಖಾಲಿಯಾಗಿವೆ? ಗೋಶಾಲೆಗಳನ್ನು ಮುಚ್ಚುವುದರ ಮೂಲಕ ಕಾಂಗ್ರೆಸ್ ಸರ್ಕಾರ ಗೋಹತ್ಯೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಸಚಿವ ಸಂಪುಟದಲ್ಲಿ 14 ಗೋಶಾಲೆಗಳಿಗೆ ಗೋವುಗಳು ಬರುತ್ತಿಲ್ಲ ಎಂದು ಸಮಜಾಯಿಸಿ ನೀಡಿದ ಸರ್ಕಾರವು ಗೋಶಾಲೆಗಳನ್ನು ಬಂದ್ ಮಾಡಲು ಹಾಗೂ ಇದರ ಅನುದಾನವನ್ನು ಇನ್ನಿತರ ಗೋಶಾಲೆಗಳಿಗೆ ನೀಡಲು ಮುನ್ನುಡಿ ಬರೆದಿರುವುದು ಬೇಸರ ತಂದಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವುಗಳ ರಕ್ಷಣೆಗೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಗೋಹತ್ಯೆ ನಿಷೇಧ ಕಾನೂನು ಹಾಗೂ ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಹಾಯವಾಣಿ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕೆ ತಂದು ಪ್ರಾಣಿಗಳ ರಕ್ಷಣೆಗೆ ಮುಂದಾಗಿತ್ತು . ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಸಾಯಿಖಾನೆಗಳು ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಎಗ್ಗಿಲ್ಲದೇ ಕಸಾಯಿ ಖಾನೆಗಳು ತಲೆಯೆತ್ತಿವೆ. ಗೋಶಾಲೆಗಳನ್ನು ನಿರ್ಮಾಣ ಮಾಡಬೇಕಿದ್ದ ಸರ್ಕಾರ ಪರೋಕ್ಷವಾಗಿ ಕಸಾಯಿ ಖಾನೆಗಳು ತಲೆ ಎತ್ತಲು ಕಾರಣವಾಗುತ್ತಿದೆ. ರಾಜ್ಯದಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.