ಬೆಂಗಳೂರು : ಈ ಹಣಕಾಸು ವರ್ಷದಲ್ಲಿ 1.32 ಲಕ್ಷ ಕೋಟಿರೂ. ಸಾಲ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಿಎಂ ಸಾಲದ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬಿಜೆಪಿ ಸಾಲಗಾರ ಸಿದ್ದರಾಮಯ್ಯ ಎಂದು ಕರೆದು ಟೀಕಿಸಿದೆ.
ಬಿಜೆಪಿ ಪೋಸ್ಟ್‌ನಲ್ಲಿ ಏನಿದೆ?
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸಾಲ (Debt) ಪರ್ವತದೆತ್ತರಕ್ಕೆ ಬೆಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯವರು ಈ ಬಾರಿಯ ಬಜೆಟ್‌ನಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದ ಒಟ್ಟು ಸಾಲ ಈಗ 8,24,389 ಲಕ್ಷ ಕೋಟಿ ರೂ. ದಾಟಲಿದೆ.
2024-25 ನೇ ಸಾಲಿನಲ್ಲಿ 1,05,246 ಕೋಟಿ ರೂ. ಸಾಲ, 2025-26 ನೇ ಸಾಲಿನಲ್ಲಿ 1.16 ಲಕ್ಷ ಕೋಟಿ ರೂ. ಸಾಲ, 2026-27 ಸಾಲಿನಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಮಾಡಲಾಗುತ್ತದೆ. ಕನ್ನಡಿಗರ ಮೇಲೆ ಸಾಲದ ಹೊರೆ ಹೇರಿದ್ದೇ ಈ ಸ್ವ-ಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನವರ ಸಾಧನೆ ಎಂದು ಬರೆದು ಪೋಸ್ಟ್ ಮಾಡಿದೆ.
ಸರ್ಕಾರದ ಆದಾಯ ವೆಚ್ಚವು 26,268 ಕೋಟಿ ರೂ. (3,11,739 ಕೋಟಿ ರೂ. ನಿಂದ 3,38,007 ಕೋಟಿ ರೂ.ಗೆ) ಹೆಚ್ಚಾಗಿದೆ. ಸಾಲ ಮರುಪಾವತಿಗಳು ಶೇ.33 ರಷ್ಟು (26,474 ಕೋಟಿ ರೂ. ನಿಂದ 35,316 ಕೋಟಿ ರೂ.) ಏರಿಕೆಯಾಗಿದೆ. ಆದರೆ ಬಂಡವಾಳ ವೆಚ್ಚವು ಕೇವಲ ಶೇ.4.69 ರಷ್ಟು(71,336 ಕೋಟಿ ರೂ.ನಿಂದ 74,682 ಕೋಟಿಗೆ ರೂ.) ಮಾತ್ರ ಹೆಚ್ಚಾಗಿದೆ.
ಜನಪ್ರಿಯ ಯೋಜನೆಗಳಿಗೆ ಖರ್ಚು ಮಾಡಿ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದರೂ, ಬಂಡವಾಳ ವೆಚ್ಚ – ರಸ್ತೆಗಳು, ಶಾಲೆಗಳು ಮತ್ತು ನೀರಾವರಿಯಂತಹ ನಿಜವಾದ ಅಭಿವೃದ್ಧಿಗೆ ಹಣ ನೀಡದೇ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ನಿಮ್ಮ ಆಡಳಿತ ವೈಫಲ್ಯಗಳಿಗೆ ಬೆಲೆ ತೆರಲು ನೀವು ಕನ್ನಡಿಗರ ಕನಸುಗಳನ್ನು ಒತ್ತೆ ಇಡುತ್ತಿದ್ದೀರಿ.
ಕನ್ನಡಿಗರಿಗೆ ‘ಸಾಲದ ಭಾಗ್ಯ’ ನೀಡುವುದೇ ನಿಮ್ಮ ಬಜೆಟ್‌ನ ಅಸಲಿ ಸಾಧನೆಯೇ? ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದ್ದ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಕರ್ನಾಟಕದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ್ದು, ಪ್ರತಿ ಕನ್ನಡಿಗನ ಮೇಲೆ 1.17 ಲಕ್ಷ ರೂಪಾಯಿ ಸಾಲದ ಹೊರೆ ಹೊರಿಸಲಾಗಿದೆ. ಸಾಲ ಮಾಡುವುದರಲ್ಲಿ ನಂಬರ್ 1, ಅಭಿವೃದ್ಧಿ ಮಾತ್ರ ಶೂನ್ಯ – ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ.
ಇದನ್ನೂ ಓದಿ : ಈ ವರ್ಷದ ಬಜೆಟ್‌ನಲ್ಲಿ ರಾಜ್ಯ ರಾಜಧಾನಿಗೆ ಏನೆಲ್ಲಾ ಸಿಕ್ಕಿದೆ ಗೊತ್ತಾ?



















