ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಹಾಗೂ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಡು ರಸ್ತೆಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕೋಪಗೊಂಡು, ದೂರವಾಣಿ ಕರೆ ಮೂಲಕ ಅವ್ಯಾಚ್ಚ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿತ ರಾಜೀವ್ ಗೌಡ ಅವರು ಕೆಪಿಸಿಸಿ ರಾಜ್ಯ ಸಂಯೋಜಕರಾಗಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ದೂರವಾಣಿ ಕರೆ ವೇಳೆ ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ದಂಗೆ ಮಾಡಿಸುತ್ತೇನೆ’ ಎಂದು ಗಂಭೀರ ಬೆದರಿಕೆ ಹಾಕಲಾಗಿದೆ ಎಂದು ಪೌರಾಯುಕ್ತೆ ಅಮೃತಾ ಗೌಡ ದೂರಿದ್ದಾರೆ.

ಈ ವೇಳೆ ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ಮೇಲೂ ಅವ್ಯಾಚ್ಚ ಹಾಗೂ ಅಶ್ಲಿಲ ಪದಗಳಿಂದ ನಿಂದನೆ ನಡೆದಿದ್ದು, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೂ ಅವಮಾನಿಸಲಾಗಿದೆ ಎನ್ನಲಾಗಿದೆ.
ಈ ಘಟನೆಯಿಂದ ಶಿಡ್ಲಘಟ್ಟ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಯಭೀತಗೊಂಡಿದ್ದು, ಸಾರ್ವಜನಿಕ ಸೇವೆ ನಿರ್ವಹಿಸುವ ಅಧಿಕಾರಿಗಳಿಗೆ ಈ ರೀತಿಯ ಬೆದರಿಕೆಗಳು ಅಸಹ್ಯಕರವಾಗಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅಧಿಕಾರಿಗಳು, ಸಿಬ್ಬಂದಿ ಮುಂದೆ ಆಯುಕ್ತೆ ಅಮೃತಾ ಕಣ್ಣೀರು
ರಾಜೀವ್ ಗೌಡ ಜೀವ ಬೆದರಿಕೆ ಹಾಕಿದ್ದಕ್ಕೆ ಮನನೊಂದು ಆಯುಕ್ತೆ ಅಮೃತಾ ಅಧಿಕಾರಿಗಳು, ಸಿಬ್ಬಂದಿ ಮುಂದೆ ಕಣ್ಣೀರು ಹಾಕಿದ್ದಾರೆ. ನಾನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದೆ, ಪತಿ ಎನ್ಆರ್ಐ ಆಗಿದ್ದಾರೆ. ಐಟಿ ಕೆಲಸ ಬಿಟ್ಟು ನಾಗರಿಕರ ಸೇವೆಗೆ ಬಂದೆ. ತಂದೆಯ ಆಸೆ ಈಡೇರಿಸಲು ಕೆಎಎಸ್ ಪರೀಕ್ಷೆ ಬರೆದಿದ್ದೆ. ಇಲ್ಲಿ ನೋಡಿದರೆ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಅಮೃತಾ ಅಳಲು ತೋಡಿಕೊಂಡಿದ್ದಾರೆ. ಏತನ್ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅಧಿಕಾರಿಗಳು, ಸಿಬ್ಬಂದಿಗಳ ಆಕ್ರೋಶ ಭುಗಿಲೆದ್ದಿದೆ. ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ಕಾರ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜೀವ್ ಗೌಡ ವಿರುದ್ಧ ಡಿಸಿಎಂ ಡಿಕೆಶಿ ಗರಂ
ನಗರಸಭೆ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಪ್ರಾಣ ಬೆದರಿಕೆ ಹಾಕಿರುವ ಆರೋಪ ಸಂಬಂಧ ರಾಜೀವ್ ಗೌಡ ವಿರುದ್ಧ ಡಿಸಿಎಂ ಡಿಕೆಶಿ ಗರಂ ಆಗಿದ್ದಾರೆ. ಇದು ಪಕ್ಷಕ್ಕೆ ಮುಜಗರ ಉಂಟು ಮಾಡುವ ರೀತಿ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ನಿಮ್ಹಾನ್ಸ್ ಸಂಸ್ಥೆಯಲ್ಲಿ ಫೀಲ್ಡ್ ಆಫೀಸರ್ ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















