ಹುಬ್ಬಳ್ಳಿ: ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿ ಹಾಗೂ ಹೊಟ್ಟೆಯಲ್ಲೇ ಮಗು ಸಾವನ್ನಪಿದ್ದಕ್ಕೆ ಬೇಸರಗೊಂಡ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗರ್ಭಿಣಿ ರಾಧಿಕಾ ಮಲ್ಲೇಶ್ ಗಡ್ಡಿಹೊಳಿ (19) ಹಾಗೂ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದರಿಂದ ಬೇಸತ್ತ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಲ್ಲೇಶ್(25) ಆತ್ಮಹತ್ಯೆಗೆ ಯತ್ನಿಸಿದ ರಾಧಿಕಾ ಪತಿ. ಸದ್ಯ ಮಲ್ಲೇಶ್ ನನ್ನು ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 2 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬೆಳಗಾವಿ ಮೂಲದ ರಾಧಿಕಾ ಗಡ್ಡಿಹೊಳಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಧಿಕಾ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲಮಟ್ಟಿ ಗ್ರಾಮದವರು. ಎಂಟೂವರೆ ತಿಂಗಳ ಗರ್ಭಿಣಿ ಆಗಿದ್ದ ರಾಧಿಕಾಗೆ 6 ಬಾರಿ ಫಿಟ್ಸ್ ಬಂದಿತ್ತು. ಭಾನುವಾರ ಕೂಡ ಫಿಟ್ಸ್ ಬಂದಿತ್ತು. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ವೈದ್ಯರು ಆಸ್ಪತ್ರೆಗೆ ಅಲೆದಾಡಿಸಿದ್ದಾರೆ. ಕೊನೆಗೆ ಬೆಳಗಾವಿಯ ಬಿಮ್ಸ್ಗೆ ಕರೆದುಕೊಂಡು ಬರುವಷ್ಟರಲ್ಲಿ ಶಿಶು ಗರ್ಭಿಣಿಯ ಹೊಟ್ಟೆಯಲ್ಲೇ ಸಾವನ್ನಪ್ಪಿತ್ತು. ರಾಧಿಕಾ ಸ್ಥಿತಿಯೂ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಬಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಸಾವನ್ನಪ್ಪಿದ್ದಾರೆ. ಆದರೆ, ಈ ಘಟನೆಯಿಂದ ಬೇಸರಗೊಂಡ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.