ಬೆಂಗಳೂರು: ಬಳ್ಳಾರಿಯ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆಯುತ್ತಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಕೂಡ ತನಿಖೆಗೆ ಖಡಕ್ ಸೂಚನೆ ನೀಡಿದೆ. ಈ ಮಧ್ಯೆ ಬಿಜೆಪಿ ನಿಯೋಗ ಇಂದು ಲೋಕಾಯುಕ್ತಕ್ಕೆ ದೂರು ನೀಡಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಸಿಕೆ ರಾಮಮೂರ್ತಿ ಮತ್ತು ಎಂಎಲ್ಸಿ ರವಿಕುಮಾರ್ ಅವರ ನಿಯೋಗ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸುವಂತೆ ದೂರು ನೀಡಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇತ್ತೀಚೆಗೆ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ತಿಳಿಸಿತ್ತು. ತಜ್ಞರ ಸಮಿತಿಯೂ ಬಾಣಂತಿಯರ ಸಾವಿಗೆ IV ಗ್ಲುಕೋಸ್ ಕಾರಣ ಎಂಬ ವರದಿ ನೀಡಿದೆ. ಆದರೂ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರದ, ವಿಶೇಷವಾಗಿ ಆರೋಗ್ಯ ಸಚಿವಾಲಯದ, ಆರೋಗ್ಯ ರಕ್ಷಣೆಯ ಮೂಲಭೂತ ಮಾನದಂಡಗಳನ್ನು ಖಾತ್ರಿಪಡಿಸುವಲ್ಲಿ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಘೋರ ನಿರ್ಲಕ್ಷ್ಯ, ಸತ್ಯವನ್ನು ಮರೆಮಾಚಲು ಮುಂದಾಗಿರುವುದು ಖಂಡನೀಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹೃದಯ ವಿದ್ರಾವಕ ಘಟನೆಯು ಸಂಪೂರ್ಣ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ-ಗುಣಮಟ್ಟದ IV ದ್ರವಗಳ ಅಡ್ಯೂನಿಸ್ಟ್ರೇಶನ್ ರೋಗಿಗಳ ಸುರಕ್ಷತೆಯ ಸಂಪೂರ್ಣ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಮತ್ತು ಪ್ರಸ್ತುತ ಆರೋಗ್ಯ ಸಚಿವರ ನಾಯಕತ್ವದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಮತ್ತು ದುರುಪಯೋಗ ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ.