ಚಿಕ್ಕೋಡಿ: ಕುಡಿದ ಮತ್ತಿನಲ್ಲಿ ಕಾರು ಚಾಲಕ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಅನಂತಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ ತಂದೆ- ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಜತ್ ತಾಲೂಕಿನ ಮೆಂಡಿಗೆರಿ ಗ್ರಾಮದ ರಾಮು ಕುರ್ಣಿ (49) ಜಾಹ್ನವಿ ಕುರ್ಣಿ (11) ಸಾವನ್ನಪ್ಪಿರುವ ದುರ್ದೈವಿಗಳು ಎನ್ನಲಾಗಿದೆ. ಸಂಬಂಧಿಕರ ಮದುವೆ ಸಮಾರಂಭಕ್ಕಾಗಿ ಅನಂತಪುರ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಜೈಲೊ ಕಾರು ವೇಗವಾಗಿ ಹಿಂಬದಿಯಿಂದ ಗುದ್ದಿ ಸುಮಾರು 70 ಅಡಿ ಅಂತರ ಎಳೆದುಕೊಂಡು ಹೋಗಿದೆ. ಅಪಘಾತ ಮಾಡಿ ಕಾರು ನಿಲ್ಲಿಸದೆ ಹೋಗಿ ಅಪರಾಧಿಗಳು ವಿಕೃತಿ ಮೆರೆದಿದ್ದಾರೆ.
ಬೈಕ್ ಮೇಲೆ ತಂದೆ-ತಾಯಿ, ಮಗಳು ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ತಾಯಿಯ ಕಣ್ಣೆದುರೇ ಗಂಡ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ತಾಯಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.