ಬೆಂಗಳೂರು: ವಾಹನಗಳಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನೀಡಿದ್ದ ಗಡುವು ಸೆ. 15ಕ್ಕೆ ಮುಕ್ತಾಯವಾಗಲಿದ್ದು, ಆನಂತರ ಗಡುವು ವಿಸ್ತರಿಸುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟ ಪಡಿಸಿದೆ.
ಈ ಕುರಿತು ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ವಾಹನ ಮಾಲೀಕರಿಗೆ 2023 ರ ಆಗಸ್ಟ್ ನಿಂದ ಅವಕಾಶ ನೀಡಲಾಗಿತ್ತು. ಅಲ್ಲದೇ, ಹಲವು ಬಾರಿ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ವಿಸ್ತರಣೆಗೂ ಒಂದು ಮಿತಿ ಇರುತ್ತದೆ. ಹೀಗಾಗಿ, ಸೆಪ್ಟೆಂಬರ್ 15 ರ ನಂತರ ವಿಸ್ತರಣೆ ಇರುವುದಿಲ್ಲ. 15ರ ನಂತರ ಪ್ಲೇಟ್ ಅಳವಡಿಸಿಕೊಳ್ಳಲಾರದವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 2019 ರ ಏ.1 ಕ್ಕೂ ಮೊದಲು ನೋಂದಣಿಯಾದ 2 ಕೋಟಿ ವಾಹನಗಳು ಎಚ್ ಎಸ್ ಅರ್ ಪಿ ಅಳವಡಿಸಿಕೊಳ್ಳಬೇಕಿದೆ. ಈ ಪೈಕಿ 52 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳು ಎಚ್ ಎಸ್ ಆರ್ ಪಿ ಅಳವಡಿಸಿಕೊಳ್ಳಬೇಕು.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಮೊದಲ ಬಾರಿ 500 ರೂ. ದಂಡ ವಿಧಿಸಲಾಗುತ್ತದೆ. ಅನಂತರ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನಂಬರ್ ಪ್ಲೇಟ್ ಅಳವಡಿಕೆಗೆ ಆನ್‌ಲೈನ್‌ನಲ್ಲಿ ಅವಕಾಶವಿದೆ. http// transport.karnataka.gov.in ಅಥವಾ www.siam.in ಮೂಲಕವೂ ಎಚ್‌ಎಸ್‌ಆರ್‌ಪಿ ಅಳವಡಿಸಲು ನೋಂದಣಿ ಮಾಡಿಕೊಳ್ಳಬಹುದು. ಸದ್ಯ ಇನ್ನೂ ಮೂರು ದಿನಗಳು ಬಾಕಿಯಿದ್ದು, ಎಚ್‌ಎಸ್‌ಆರ್‌ಪಿ ಬಾಕಿ ಉಳಿಸಿಕೊಂಡ ವಾಹನ ಮಾಲೀಕರು ನೋಂದಣಿ ಮಾಡಿಕೊಳ್ಳಿ. ಇಲ್ಲದಿದ್ದರೆ ದಂಡ ಪಾವತಿಗೆ ಸಿದ್ಧರಾಗಿ ಎಂದು ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಅಧಿಕಾರಿಗಳು ಹೇಳಿದ್ದಾರೆ.