ಭಾರತದ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅಕ್ಷರಶಃ ಅಬ್ಬರಿಸಿದ್ದಾರೆ. ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅವರು, ಭರ್ಜರಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ಕುಮಾರ ಸಂಗಾಕ್ಕರ ಅವರ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದ ಡಿ ಕಾಕ್, ಆರಂಭದಲ್ಲಿ ಹೊಸ ಚೆಂಡನ್ನು ಎಚ್ಚರಿಕೆಯಿಂದ ಎದುರಿಸಿ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು. ಆದರೆ ಒಮ್ಮೆ ಕ್ರೀಸ್‌ಗೆ ಹೊಂದಿಕೊಂಡ ನಂತರ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅವರು, ಕೇವಲ 80 ಎಸೆತಗಳಲ್ಲೇ ಶತಕ ಪೂರೈಸಿ ಸಂಭ್ರಮಿಸಿದರು. ಅಂತಿಮವಾಗಿ 89 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 106 ರನ್ ಗಳಿಸಿ ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಿವೃತ್ತಿ ವಾಪಸ್ ಪಡೆದು ಮೈದಾನಕ್ಕಿಳಿದಿರುವ ಡಿ ಕಾಕ್ ಅವರ ಈ ಆಟ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿತು.
ಭಾರತದ ವಿರುದ್ಧ ದಾಖಲೆಯ ಶತಕ
ಈ ಶತಕದೊಂದಿಗೆ ಡಿ ಕಾಕ್ ಅವರು ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಕೇವಲ 23 ಇನಿಂಗ್ಸ್‌ಗಳಲ್ಲಿ 7 ಶತಕ ಸಿಡಿಸುವ ಮೂಲಕ, ಅವರು ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ (85 ಇನಿಂಗ್ಸ್‌ಗಳಲ್ಲಿ 7 ಶತಕ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್ ಹಾಗೂ ಕುಮಾರ ಸಂಗಾಕ್ಕರ ತಲಾ 6 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಡಿ ಕಾಕ್ ಅವರಿಗಿಂತ ಹಿಂದಿದ್ದಾರೆ.
ಕೊಹ್ಲಿ ಕನ್ವರ್ಷನ್ ರೇಟ್ ಮೀರಿಸಿದ ಆಟಗಾರ
ವಿಶೇಷವೆಂದರೆ, ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ (Conversion Rate) ವಿಚಾರದಲ್ಲಿ ಡಿ ಕಾಕ್ ಅವರು ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಶೇ. 41.40 ರಷ್ಟು ಬಾರಿ ಅರ್ಧಶತಕವನ್ನು ಶತಕವಾಗಿಸಿದರೆ, ಡಿ ಕಾಕ್ ಶೇ. 41.81 ರಷ್ಟು ಯಶಸ್ಸು ಕಂಡಿದ್ದಾರೆ. ಇದಲ್ಲದೆ, ವಿದೇಶಿ ನೆಲದಲ್ಲಿ (ನಿರ್ದಿಷ್ಟ ದೇಶವೊಂದರಲ್ಲಿ) ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಸಾಲಿಗೂ ಅವರು ಸೇರಿದ್ದಾರೆ. ಭಾರತದಲ್ಲೇ 7 ಶತಕ ಬಾರಿಸುವ ಮೂಲಕ, ಯುಎಇಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸಯೀದ್ ಅನ್ವರ್ ಹಾಗೂ ಇಂಗ್ಲೆಂಡ್‌ನಲ್ಲಿ ರೋಹಿತ್ ಶರ್ಮಾ ಅವರು ಬಾರಿಸಿದ್ದ ತಲಾ 7 ಶತಕಗಳ ದಾಖಲೆಯನ್ನು ಸರಿದೂಗಿಸಿದ್ದಾರೆ.
ವಿಕೆಟ್ ಕೀಪರ್ ಆಗಿ ಹೊಸ ಮೈಲಿಗಲ್ಲು
ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಶತಕ (7) ಸಿಡಿಸಿದ ವಿಕೆಟ್ ಕೀಪರ್ ಎಂಬ ಕೀರ್ತಿಯೂ ಡಿ ಕಾಕ್ ಪಾಲಾಗಿದೆ. ಈ ಮೂಲಕ ಅವರು ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಸಂಗಾಕ್ಕರ ಅವರ ದಾಖಲೆ ಮುರಿದಿದ್ದಾರೆ. ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ 23ನೇ ಶತಕ ಬಾರಿಸುವ ಮೂಲಕ, ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಎಂಬ ಕುಮಾರ ಸಂಗಾಕ್ಕರ ಅವರ ದಾಖಲೆಯನ್ನು ಡಿ ಕಾಕ್ ಸರಿಗಟ್ಟಿದ್ದಾರೆ.[1]
ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಸಮರದ ಜನಪ್ರಿಯತೆ ಕುಸಿಯುತ್ತಿದೆಯೇ? ಗೂಗಲ್ ವರದಿ ನೀಡಿದೆ ಅಚ್ಚರಿಯ ಮಾಹಿತಿ



















