ಡಿಸಿಎಂ ಡಿಕೆ ಶಿವಕುಮಾರ್ ಕನಸಿನ ಕೂಸಿನ ಮೇಲೆ ಇಡಿ ಕೆಂಗಣ್ಣು ಬಿದ್ದಿದೆ. ಕಳೆದ ಮೂರು ದಿನಗಳಿಂದ ಬಿಬಿಎಂಪಿ ಮೇಲೆ ದಾಳಿ ನಡೆಸಿರುವ ಇಡಿ ತಂದ ಹಲವು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದೆ. ಈ ಮಧ್ಯೆ ಈಗ ಡಿಸಿಎಂಗೂ ಬಿಸಿ ತಟ್ಟಿದೆ.
ನಗರದಲ್ಲಿ ನಿರ್ಮಾಣ ಮಾಡಬೇಕಿದ್ದ ಬಹುಕೋಟಿ ವೆಚ್ಚದ ಕಾಮಗಾರಿಯ ಡಿಪಿಅರ್ ನ್ನು ವಶಕ್ಕೆ ಪಡೆದಿರುವ ಇಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ, ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದೆ.
ಪ್ರಮುಖವಾಗಿ ಟನಲ್ ರಸ್ತೆ ಡಿಪಿಅರ್ ನ್ನು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸುರಂಗ ಮಾರ್ಗದ ಡಿಪಿಆರ್ ನ್ನು ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದನ್ನು ಈಗ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿರುವ ಇಡಿ, ಸಾಕಷ್ಟು ಅನುಮಾನ ವ್ಯಕ್ತಪಡಿಸಿದೆ.
ಸುಮಾರು 13 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಯ ಡಿಪಿಆರ್ ನ್ನು ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ ಟನಲ್ ರಸ್ತೆಯ ಡಿಪಿಆರ್ ನ್ನು ಅಧಿಕಾರಿಗಳು ಸಿದ್ಧ ಪಡಿಸಿದ್ದಾರೆ. ಈ ಸುರಂಗ ಮಾರ್ಗ ನಿರ್ಮಾಣಕ್ಕೆ 13 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಡಿಪಿಆರ್ ಸಿದ್ಧಪಡಿಸಲಾಗಿದೆ.ಈ ಕುರಿತು ಇಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ, ಪಾಲಿಕೆಯ ಜಾಬ್ ಕೋಡ್ ಗಳನ್ನು ಕೂಡ ಪರಿಶೀಲಿಸಲಾಗಿದೆ. ಈ ವೇಳೆ ದೊಡ್ಡ ವ್ಯತ್ಯಾಸ ಕುಂಡುಬಂದಿದೆ. ಜಾಬ್ ಕೋಡ್ ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತದ ಹಣವನ್ನು ಪಾವತಿ ಮಾಡಲಾಗಿದೆ. ಜಾಬ್ ಕೋಡ್ ಗೂ ಬಿಡುಗಡೆಯಾದ ಹಣಕ್ಕೂ ತಾಳೆ ಸಿಗುತ್ತಿಲ್ಲ. ಇದರಲ್ಲಿ ನೂರಾರು ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದ್ದು, ಇಂಜಿನಿಯರ್ ಗಳಿಗೆ ಇಡಿ ಅಧಿಕಾರಿಗಳು ಈ ಕುರಿತು ಸಾಕಷ್ಟು ಪ್ರಶ್ನೆ ಮಾಡಿದ್ದಾರೆ. ಆದರೆ, ಇದಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದೆ..
ಬೋರ್ ವೆಲ್ ಹಗರಣದ ಲೆಕ್ಕ ಕೇಳಿ ಇಡಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಬೋರ್ ನೀರಿನ ಹೆಸರಿನಲ್ಲಿ ಪಾಲಿಕೆ ಅಧಿಕಾರಿಗಳು ನೂರಾರು ಕೋಟಿ ರೂ. ನುಂಗಿ ನೀರು ಕುಡಿದಿದ್ದಾರೆ. ಇಂದು ಸಂಜೆ ಒಳಗೆ ಬೋರ್ ವೆಲ್ ಹಗರಣದ ಪೂರ್ತಿ ದಾಖಲೆ ಹಾಗೂ ವಿವರಣೆ ನೀಡುವಂತೆ ಇಡಿ ತಾಕೀತು ಮಾಡಿದೆ. ಸಂಪೂರ್ಣ ವರದಿಗಳು ಕೈ ಸೇರಿದಂತೆ ಮತಷ್ಟು ಹಗರಣ ಬಯಲಿಗೆ ಬರಲಿದೆ.