ಉತ್ತರಪ್ರದೇಶ : ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರಾಜ್ಯದ ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾ ಕುಂಭಮೇಳದ ಹೈಲೈಟ್ ಆಗಿರುವ ತ್ರಿವೇಣಿ ಸಂಗಮದಲ್ಲಿನ ಸ್ನಾನಕ್ಕೆ ಡಿಸಿಎಂ ಡಿಕೆಶಿ ತೆರಳಿದ್ದು, ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ಸ್ನಾನ ಮಾಡಲಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 8 ರಂದು ಡಿಸಿಎಂ ಡಿಕೆಶಿ ಪ್ರಯಾಗ್‌ರಾಜ್‌ಗೆ ತೆರಳಲಿದ್ದು, 9 ರಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದಾರೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದ ಸ್ನಾನ ಹಾಗೂ ಆಯೋಜನೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಅದನ್ನೆಲ್ಲಾ ಲೆಕ್ಕಿಸದ ಡಿಸಿಎಂ ಡಿಕೆಶಿ, ವೈಯಕ್ತಿಕ ವಿಚಾರವಾಗಿ ಈ ಆಚರಣೆಯನ್ನು ಮಾಡುತ್ತಿದ್ದೇನೆಂದು ತಮ್ಮ ಆಪ್ತ ಬಳಗದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯನ್ನು ಹಾಗೂ ಅದರ ಅಂಗ ಪಕ್ಷಗಳನ್ನು ಹೊರತುಪಡಿಸಿದರೆ, ವಿಪಕ್ಷಗಳು ಕುಂಭಮೇಳಕ್ಕೆ ಭಾರೀ ವಿರೋಧ ಹೊರ ಹಾಕುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ, ಡಿಸಿಎಂ ಡಿಕೆಶಿ ಕುಂಭಮೇಳದಲ್ಲಿ ಭಾಗಿಯಾಗುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.