ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಓಟರ್ಸ್ ಅಧಿಕಾರ್ ಯಾತ್ರೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ನಿನ್ನೆ(ಶನಿವಾರ) ತಡ ರಾತ್ರಿ ವೇಳೆ ಕಟೀಯಾರ ಶಿಬಿರದಲ್ಲಿ ಪಾಲ್ಗೊಂಡಿದ್ದು, ಇಂದು(ರವಿವಾರ) ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಡಿಸಿಎಂ ಡಿಕೆಶಿ ನೇತೃತ್ವದ ತಂಡದಲ್ಲಿ ಶಾಸಕರಾದ ಶ್ರೀನಿವಾಸ ಮಾನೆ, ಬಾಬಾಸಾಹೇಬ್ ಪಾಟೀಲ್, ರಾಜು ಸೇಠ್, ರಿಜ್ವಾನ್ ಅರ್ಷದ್, ಬಿ.ಎಂ. ನಾಗರಾಜ್, ನಯನಾ ಮೋಟಮ್ಮ, ಅಶೋಕ್ ಪಟ್ಟಣ್, ಆನಂದ್ ಕಡೂರು, ವೇಣುಗೋಪಾಲ್ ನಾಯಕ್, ಬಸನಗೌಡ ಬಾದರ್ಲಿ, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಸೇರಿ ಮತ್ತಿತರರು ಇದ್ದಾರೆ. ಇಂದು, ನಾಳೆ ಕೂಡ ರಾಜ್ಯದ ಕೆಲವು ನಾಯಕರು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನೂ ಕಾಂಗ್ರೆಸ್ ಬಲ್ಲಮೂಲಗಳು ಮಾಹಿತಿ ನೀಡಿವೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬಿಹಾರದಲ್ಲಿ ನಡೆಯುತ್ತಿರುವ ನಮ್ಮ ಪಕ್ಷದ ಓಟರ್ಸ್ ಅಧಿಕಾರ್ ಯಾತ್ರೆಗೆ ಶಾಸಕರೊಂದಿಗೆ ಬಂದಿದ್ದೇನೆ. ಮುಖ್ಯಮಂತ್ರಿಗಳನ್ನೂ ಆಹ್ವಾನ ಮಾಡಿದ್ದು ಅವರು ಇನ್ನೊಂದು ದಿನ ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಬೇಕಲ್ಲವೇ? ಆದ ಕಾರಣ ಸುರ್ಜೇವಾಲ ಅವರು ಸಭೆ ಕರೆದು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.