ಬೆಂಗಳೂರು : ಹೈಕಮಾಂಡ್ ಸಮಯ ನಿಗದಿ ಮಾಡಿದಾಗ ಪಕ್ಷ, ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚೆ ಮಾಡಲು ದೆಹಲಿಗೆ ಭೇಟಿ ನೀಡುತ್ತಿರುತ್ತೇವೆ. ಪಕ್ಷ ಸಂಘಟನೆ ವಿಚಾರದಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ದೆಹಲಿಗೆ ಹೊರಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಧ್ಯಾಹ್ನ 12 ಗಂಟೆಗೆ ಕೇಂದ್ರ ಅರಣ್ಯ ಇಲಾಖೆ ಸಚಿವ ಭೂಪೇಂದರ್ ಯಾದವ್ ಅವರು ಸಮಯ ನೀಡಿದ್ದು, ಎತ್ತಿನಹೊಳೆ ಮತ್ತು ಮಹದಾಯಿ ನದಿಯ ಕಳಸಾ ಬಂಡೂರಿ ನಾಲಾ ಯೋಜನೆಯ ವಿಚಾರದಲ್ಲಿ ಕೆಲವು ಅನುಮತಿಗಳು ಬಾಕಿ ಇರುವುದರಿಂದ ಕೆಲಸ ಆರಂಭಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೇಳಿರುವ ದಾಖಲೆಗಳನ್ನು ನಾವು ಒದಗಿಸಿಕೊಟ್ಟಿದ್ದೇವೆ. ಬದಲಿ ಜಮೀನನ್ನು ಕೂಡ ಅರಣ್ಯ ಇಲಾಖೆಗೆ ನೀಡಿದ್ದೇವೆ ಎಂದಿದ್ದಾರೆ. ಡಿಕೆಶಿ ಸಂಜೆ ವೇಳೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದು, ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.