ಬೆಂಗಳೂರು: ಬಿಜೆಪಿಯವರು ತಮ್ಮ ಹೋರಾಟದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರು ಫೋಟೋ ತೆಗೆದು ತಮ್ಮ ಫೋಟೋ ಹಾಕಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಗುಜರಾತ್ ಪ್ರವಾಸಕ್ಕೆ ಹೊರಟ ಸಂದರ್ಭದಲ್ಲಿ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧಿವೇಶನದ ಹಿನ್ನೆಲೆಯಲ್ಲಿ ಗುಜರಾತ್ ಗೆ ಹೊರಟಿದ್ದೇನೆ. ಪಕ್ಷದ ಸಂಘಟನೆ ಕಾರ್ಯಗಳನ್ನು ನಾವು ಚುರುಕುಗೊಳಿಸಿದ್ದೇವೆ. ಡಿಸೆಂಬರ್ ನಲ್ಲಿ ನಡೆದ ಸಮಾವೇಶದ ವೇಳೆ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಘೋಷಣೆ ಮಾಡಲಾಗಿತ್ತು. ಹೀಗಾಗಿ ಪಕ್ಷದ ಸಂಘಟನೆಯನ್ನು ದೇಶಾದ್ಯಂತ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಖರ್ಗೆ ಸಹೇಬ್ರು ಕೂಡ ಕಾಂಗ್ರಸ್ ಪಕ್ಷಕ್ಕೆ ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ಹೀಗಾಗಿ ಸಾಕಷ್ಟು ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ಬೆಲೆ ಏರಿಕೆಯಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಕ್ರೋಶದಲ್ಲಿ ಇವತ್ತೇ ಅವರು ಬೋರ್ಡ್ ಬದಲಾವಣೆ ಮಾಡಬೇಕು. ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಕೈ ಬಿಟ್ಟು, ತಮ್ಮ ಫೋಟೋ ಹಾಕಿಕೊಳ್ಳಬೇಕು. ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸಬೇಕು. ಬಿಜೆಪಿ ನಾಯಕರು ಬೆಲೆ ಏರಿಕೆ ವಿರೋಧಿಸಿ ಕೇಂದ್ರ ನಾಯಕರ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.