ಬೆಂಗಳೂರು: ಕಳೆದೊಂದು ವಾರದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಸಾಫ್ಟ್ ಹಿಂದುತ್ವದ ಕಡೆ ವಾಲುತ್ತಿದ್ದಾರೆ ಎಂಬ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಆರಂಭವಾಗಿದೆ.
ಅಷ್ಟಕ್ಕೂ ಈ ರೀತಿಯ ಚರ್ಚೆಯೊಂದು ಮುನ್ನೆಲೆಗೆ ಬರಲು ಡಿಸಿಎಂ ಡಿಕೆಶಿ ಅವರ ನಡೆಯೇ ಕಾರಣವೆಂದು ಉಲ್ಲೇಖಿಸಲಾಗುತ್ತಿದ್ದು, ಡಿಕೆಶಿ ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆo ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದು ಹಾಗೂ ಶಿವರಾತ್ರಿಯ ಅಂಗವಾಗಿ ಕೊಯಮತ್ತೂರಿನ ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ವೇದಿಕೆ ಹಂಚಿಕೊಂಡಿರುವುದೇ ಎನ್ನಲಾಗಿದೆ.
ಹೀಗೆ ಏಕಾಏಕಿ ಸಾಫ್ಟ್ ಹಿಂದುತ್ವದ ಕಡೆಗೆ ಅವರು ವಾಲುತ್ತಿರುವುದು ಮಾತ್ರವಲ್ಲದೆ, ಧರ್ಮ, ಹಿಂದುತ್ವದ ಬಗ್ಗೆಯೂ ನೀಡುತ್ತಿರುವ ಹೇಳಿಕೆಗಳು ಅನೇಕ ರಾಜಕೀಯ ಮಜಲುಗಳಲ್ಲಿ ತನ್ನದೇ ಆದ ಬೆಳವಣಿಗೆಗಳು ನಡೆಯುತ್ತಿದೆ ಎಂಬುವುದನ್ನು ದೃಢಪಡಿಸುತ್ತಿದೆ.
ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಮುನ್ನೆಲೆಗೆ ಬಂದಿದ್ದು, ಬಜೆಟ್ ಅಧಿವೇಶನದ ಬಳಿಕ ಅದಕ್ಕೆ ವೇಗ ಕೂಡ ಸಿಗಲಿದೆ. ಒಂದು ವೇಳೆ ಸಿಎಂ ಸಿದ್ಧರಾಮಯ್ಯ ಆ ಸ್ಥಾನ ಬಿಟ್ಟು ಕೊಡಲು ಒಪ್ಪದೇ ಹೋದ್ರೆ ಅದಕ್ಕೆ ಟಕ್ಕರ್ ಕೊಡಲು ಪ್ರತ್ಯೇಕ ವೇದಿಕೆಯೊಂದನ್ನು ಡಿಕೆಶಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೂಡ ಆರಂಭವಾಗಿದೆ.
ಮಹಾಕುಂಭಮೇಳದಲ್ಲಿ ಭಾಗಿಯಾಗಿರುವುದಕ್ಕೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ನಾನು ಹುಟ್ಟಿದಾಗಲೂ ಹಿಂದು, ಸಾಯುವಾಗಲೂ ಹಿಂದು. ಎಲ್ಲಾ ಧರ್ಮಗಳನ್ನು ನಾನು ಪ್ರೀತಿಸುತ್ತೇನೆ. ಅದರಲ್ಲಿ ತಪ್ಪೇನಿದೆ? ಎಂದು ಸಮರ್ಥನೆ ನೀಡಿದ್ದಾರೆ.
ಶಿವರಾತ್ರಿಯ ದಿನದಂದು ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಹಾಜರಾಗಿದ್ದಕ್ಕೂ ಉತ್ತರಿಸಿರುವ ಅವರು, ನನಗೆ ಆಹ್ವಾನವನ್ನು ಜಗ್ಗಿ ವಾಸುದೇವ್ ನೀಡಿದ್ದಾರೆ. ಅದಕ್ಕೆ ನಾನು ಹೋಗಿದ್ದೇ. ನನ್ನ ಹೆಸರಿನಲ್ಲೇ ಶಿವ ಇದ್ದಾನೆ ಎನ್ನುವುದರ ಮೂಲಕ ಉತ್ತರಿಸಿರುವುದು ಹಲವು ಚರ್ಚೆಗಳನ್ನು ರಾಜಕಾರಣದಲ್ಲಿ ಹುಟ್ಟು ಹಾಕಿದೆ.