ದಾವಣಗೆರೆ : ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಸಕ್ತ ವರ್ಷ ದಾಖಲಾಗಿದ್ದ ಒಟ್ಟು 173 ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ 20 ಕೋಟಿ 38 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಾಹನಗಳು ಸೇರಿದಂತೆ ಹಲವು ವಸ್ತುಗಳನ್ನು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿನ ಡಿಎಆರ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಪ್ರಾಪರ್ಟಿ ರಿಟನ್ ಪೆರೇಡ್ ನಡೆಸಲಾಯಿತು.
ಪ್ರತಿ ವರ್ಷದಂತೆ ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚಾರಣೆ ನಡೆಸಲಾಗಿದ್ದು, ಈ ವೇಳೆ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸ್ವತ್ತುಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಪ್ರಕರಣಗಳಲ್ಲಿ ತನಿಖೆ ನಡೆಸಿ ವಸ್ತುಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರದ ಜೊತೆಗೆ ನಗದು ಬಹುಮಾನ ನೀಡಲಾಯಿತು.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 19.64 ಕೋಟಿ ಮೌಲ್ಯದ 24 ಕೆ.ಜಿ 726 ಗ್ರಾಂ ತೂಕದ ಬಂಗಾರದ ಆಭರಣ. 24.35 ಲಕ್ಷ ಮೌಲ್ಯದ 26 ಕೆ.ಜಿ 672 ಗ್ರಾಂ ತೂಕದ ಬೆಳ್ಳಿ ಆಭರಣ, 85.65 ಲಕ್ಷ ನಗದು, 46.28 ಲಕ್ಷ ಮೌಲ್ಯದ 90 ವಾಹಗಳು, 73.80 ಲಕ್ಷ ಮೌಲ್ಯದ 492 ಮೊಬೈಲ್ಗಳು, 16,81,000 ಮೌಲ್ಯದ ಕೃಷಿ ಉಪಕರಣಗಳನ್ನು ಪೊಲೀಸರು ವಾರಸುದಾರರಿಗೆ ಒಪ್ಪಿಸಿದರು. ಕಳ್ಳತನವಾಗಿದ್ದ ಸ್ವತ್ತನ್ನು ಮರಳಿಸಿದ ಪೊಲೀಸರಿಗೆ ವಾಸುದಾರರು ಧನ್ಯವಾದ ತಿಳಿಸಿದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ಬಿ. ನಾಗೇಂದ್ರಗೆ ED ಬಿಗ್ ಶಾಕ್.. 8 ಕೋಟಿ ಮೌಲ್ಯದ ಆಸ್ತಿ ಜಪ್ತಿ!



















