ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ರಂಗೇರಿದ್ದು, ‘ಕೈ’ಗೆ ಬಂಡಾಯದ ಸಂಕಷ್ಟ ಎದುರಾಗಿದೆ. ಅಲ್ಲಿ ಕಾಂಗ್ರೆಸ್ ವರ್ಸಸ್ ಮುಸ್ಲಿಂ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಮರ್ಥ್ ಅಖಾಡಕ್ಕೆ ಪೈಲ್ವಾನ್ ಎಂಟ್ರಿ ಕೊಟ್ಟಿದ್ದಾರೆ. ಇಂದು ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ. ನಾನು ಚಿಕ್ಕವನೇನಲ್ಲ. ಬಾಯಲ್ಲಿ ಲಾಲಿಪಪ್ ಇಟ್ಟುಕೊಂಡಿಲ್ಲ. ನನ್ನನ್ನು ಮುಸ್ಲಿಂ ಸಮುದಾಯದವರು ಯಾವುತ್ತೂ ಕೈ ಬಿಡುವುದಿಲ್ಲ. ನನ್ನ ಗೆಲುವು ನಿಶ್ಚಿತ ಎಂದಿದ್ದಾರೆ. ಎಲ್ಲ ನಾಯಕರ ಜೊತೆಗೆ ನನ್ನ ಒಡನಾಟವಿದೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ಕಾರಣಕ್ಕೆ ನಾನು ಕೊನೆಯ ಕ್ಷಣದವರೆಗೂ ಕಾದೆ. ಆದರೆ, ನಮಗೆ ಮತ್ತೆ ಹಿನ್ನಡೆಯಾಯಿತು. ಹೀಗಾಗಿ ನಾನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಸಿಎಂ-ಡಿಸಿಎಂ ಇಬ್ಬರು ನನ್ನ ಜೊತೆ ಮಾತನಾಡುತ್ತಾರೆ ಎಂಬುವುದು ಸುಳ್ಳು. ಗೆಲುವಾಗಲಿ-ಸೋಲಾಗಲಿ ನಾನು ಚುನಾವಣಾ ಕಣದಲ್ಲಿರುತ್ತೇನೆ. ಆರು ಬಾರಿ ದಿ. ಶಾಮನೂರು ಶಿವಶಂಕರಪ್ಪ ಅವರನ್ನು ಗೆಲ್ಲಿಸಿದ್ದೇವೆ. ಆದರೆ, ಈ ಬಾರಿ ಅವರ ನಿಧನದ ಬಳಿಕ ನಮಗೆ ಟಿಕೆಟ್ ಕೊಡುತ್ತಾರೆ ಎಂಬ ನಂಬಿಕೆ ಇತ್ತು. ಅದು ಹುಸಿಯಾಗಿದೆ ಎಂದಿದ್ದಾರೆ.
ಅಲ್ಪಸಂಖ್ಯಾತರು ಹಾಗೂ ಅಹಿಂದ ಜನರು ನನ್ನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆಂಬ ನಂಬಿಕೆ ಇದೆ. ನಾನು ಶಾಮನೂರು ಶಿವಶಂಕರಪ್ಪ ಅವರ ಶಿಷ್ಯ. ಭುಜಕ್ಕೆ ಭುಜ ಕೊಟ್ಟು ನಿಂತಿದ್ದೆ. ಅವರು ಇಲ್ಲವಾದಾಗ ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ನಾನು ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಅಲ್ಲದೇ, ಇಂದು ನಗರದಲ್ಲಿನ ಜೆ.ಇಮಾಮ್ ನಗರ ವೃತ್ತದಿಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ಪಾಲಿಕೆಗೆ ಆಗಮಿಸಿ ಎರಡನೇ ಬಾರಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಸಾದಿಕ್ಗೆ ಮುಸ್ಲಿಂ ಸಮುದಾಯದವರು ಬೆಂಬಲ ವ್ಯಕ್ತಪಡಿಸಿ, ಅವರ ಪರ ಘೋಷಣೆ ಕೂಗಿದರು. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಇದನ್ನೂ ಓದಿ ; ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಅವಘಡ.. ಹುಲ್ಲು ಸಮೇತ ಸುಟ್ಟು ಬೂದಿಯಾದ ಟ್ರ್ಯಾಕ್ಟರ್!



















