ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕ್ರಿಕೆಟ್‌ನಿಂದಲ್ಲ, ತಮ್ಮ ವೈಯಕ್ತಿಕ ಜೀವನದಿಂದ. ಪತ್ನಿ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ ನಂತರ ಇದೇ ಮೊದಲ ಬಾರಿಗೆ, ಮಾಡೆಲ್ ಮಹಿಕಾ ಶರ್ಮಾ ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯ ಕಾಣಿಸಿಕೊಂಡಿದ್ದು, ಇವರಿಬ್ಬರ ನಡುವಿನ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಒಂದೇ ಕಾರಿನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿರುವುದು ಸೆರೆಯಾಗಿದೆ. ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದ ಈ ಜೋಡಿ, ಪಾಪರಾಜಿಗಳ ಕಣ್ಣಿಗೆ ಬೀಳುತ್ತಿದ್ದಂತೆ ಒಟ್ಟಾಗಿ ಟರ್ಮಿನಲ್‌ನತ್ತ ಹೆಜ್ಜೆ ಹಾಕಿದ್ದಾರೆ. ವಿದೇಶಿ ಪ್ರವಾಸಕ್ಕೆ ತೆರಳುತ್ತಿರುವಂತೆ ಕಂಡುಬಂದ ಇವರಿಬ್ಬರ ಈ ಸಾರ್ವಜನಿಕ ನೋಟವು, ಹಲವು ದಿನಗಳಿಂದ ಹರಿದಾಡುತ್ತಿದ್ದ ಪ್ರೇಮದ ಗುಸುಗುಸುವನ್ನು ಬಹುತೇಕ ಖಚಿತಪಡಿಸಿದೆ.
“ವದಂತಿಗಳಿಗೆ ಕಾರಣವಾಗಿದ್ದ ಹಿಂದಿನ ಘಟನೆಗಳು”
ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾಕಪ್ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಮಹಿಕಾ ಶರ್ಮಾ ಕ್ರೀಡಾಂಗಣದಲ್ಲಿ ಹಾಜರಿದ್ದು, ಹಾರ್ದಿಕ್‌ರನ್ನು ಹುರಿದುಂಬಿಸಿದ್ದರು. ಅದಕ್ಕೂ ಮುನ್ನ, ಇಬ್ಬರೂ ಒಂದೇ ರೀತಿಯ ಬಾತ್‌ರೋಬ್ ಧರಿಸಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಏರ್‌ಪೋರ್ಟ್‌ನಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿರುವುದು, ಇಬ್ಬರ ನಡುವಿನ ಸಂಬಂಧದ ಬಗ್ಗೆ ಇದ್ದ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಂತಾಗಿದೆ.

“ಯಾರು ಈ ಮಹಿಕಾ ಶರ್ಮಾ”?
ಮಹಿಕಾ ಶರ್ಮಾ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಯುವ ಪ್ರತಿಭೆ. ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದರೂ, ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋನಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಇವರು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ‘ವರ್ಷದ ಮಾಡೆಲ್ (ನವಯುಗ)’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹಲವಾರು ಮ್ಯೂಸಿಕ್ ವಿಡಿಯೋ ಮತ್ತು ಕಿರುಚಿತ್ರಗಳಲ್ಲೂ ಮಹಿಕಾ ನಟಿಸಿದ್ದಾರೆ.
2024ರಲ್ಲಿ ಪಾಂಡ್ಯ ತಮ್ಮ ಪತ್ನಿ ನತಾಸಾರಿಂದ ಬೇರ್ಪಟ್ಟ ನಂತರ, ಇದೇ ಮೊದಲ ಬಾರಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಇವರ ಈ ನಡೆ ಹೊಸ ಅಧ್ಯಾಯದ ಆರಂಭದ ಮುನ್ಸೂಚನೆ ನೀಡಿದೆ.