ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾ. 1ರಿಂದ 8ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚಲನಚಿತ್ರೋತ್ಸವ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಟೆಂಟ್ ಮಾದರಿಯಲ್ಲಿ ಕೆಲವು ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಈ ಹಿಂದೆ ಕೂಡ ಟೆಂಟ್ ಮಾದರಿಯಲ್ಲಿ ಸಿನಿಮಾಗಳ ಪ್ರದರ್ಶನ ನಡೆಯುತ್ತಿತ್ತು. ಆಗ ಪ್ರೊಜೆಕ್ಟರ್ ಗಳ ಮೂಲಕ ಸಿನಿಮಾ ತೋರಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು. ‘ಭೂತಯ್ಯನ ಮಗ ಅಯ್ಯು’, ‘ಬಂಗಾರದ ಮನುಷ್ಯ’, ‘ಗಂಧದ ಗುಡಿ’ ಸೇರಿದಂತೆ ಹಲವು ಸಿನಿಮಾಗಳನ್ನು ಟೆಂಟ್ ಮಾದರಿಯಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದ್ದಾರೆ.
16ನೇ ಬೆಂಗಳೂರು ಚಲನಚಿತ್ರೋತ್ಸವವು ಮಾರ್ಚ್ 1 ರಿಂದ 8ರ ವರೆಗೆ ಒರಾಯಿನ್ ಮಾಲ್ ನಲ್ಲಿ ನಡೆಯಲಿದೆ. ಪಾಸ್ ಗಳು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಸಿಗುತ್ತವೆ ಎಂದು ಹೇಳಿದ್ದಾರೆ.
ಈ ಬಾರಿ ನಿರ್ದೇಶಕರು, ಸಿನಿಮಾಟೊಗ್ರಾಫರ್ ಗಳು ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ‘ಅಮರನ್’, ‘ಮಂಜುಮೆಲ್ ಬಾಯ್ಸ್’ ಸೇರಿದಂತೆ ಇತ್ತೀಚೆಗೆ ಹೆಸರು ಮಾಡಿದ ಹಲವು ಸಿನಿಮಾಗಳ ನಿರ್ದೇಶಕರನ್ನು ಈ ಬಾರಿ ಚಿತ್ರೋತ್ಸವಕ್ಕೆ ಸಂವಾದ, ಕಾರ್ಯಗಾರಗಳಿಗೆ ಆಹ್ವಾನಿಸಲಾಗುತ್ತಿದೆ. ‘ಸರ್ವಜನಾಂಗದ ಶಾಂತಿಯ ತೋಟ’ ಥೀಮ್ ಅಡಿ ಭ್ರಾತೃತ್ವ ಸಾರುವ ಕೆಲವು ಸಿನಿಮಾಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಕೆಲವು ಹಳೆಯ ಸಿನಿಮಾಗಳನ್ನು ಡಿಜಿಟಲೈಜ್ ಮಾಡಿ ಅವುಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದ್ದಾರೆ.