ನವದೆಹಲಿ: “ಡೇಟಾ ಎಂಬುದು ಹೊಸ ತೈಲದಂತೆ” ಎಂದು ಹೇಳಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ದೆಹಲಿಯಲ್ಲಿ ನಡೆಯುತ್ತಿರುವ ಖಾಸಗಿ ಸುದ್ದಿವಾಹಿನಿಯ ವರ್ಲ್ಡ್ ಸಮ್ಮಿಟ್‌ನಲ್ಲಿ ಭಾರತದ ಡಿಜಿಟಲ್ ಬೆಳವಣಿಗೆಯ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ಡಿಜಿಟಲ್ ಸಾಲ, ವೇಗದ ಮೊಬೈಲ್ ಡೇಟಾ ಮತ್ತು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳಂತಹ (LLMs) ಉಪಕ್ರಮಗಳು ಭಾರತದ ಪ್ರಗತಿಗೆ ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ.
ಶೃಂಗಸಭೆಯ ಎರಡನೇ ದಿನದಂದು ಮಾತನಾಡಿದ ಅವರು, ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡುವ ಸಾಮರ್ಥ್ಯವಿರುವ, ದೇಶೀಯವಾಗಿ ನಿರ್ಮಿಸಲಾದ ಅಂಗೈ ಗಾತ್ರದ ಸೆಮಿಕಂಡಕ್ಟರ್ ವೇಫರ್ ಅನ್ನು ಪ್ರದರ್ಶಿಸಿದ್ದಾರೆ.
“ನಮ್ಮಲ್ಲಿ ಅತ್ಯಂತ ಮಹತ್ವದ ಪ್ರತಿಭಾನ್ವಿತರ ನೆಲೆಯಿದ್ದು, ಜಾಗತಿಕ ಚಿಪ್ ವಿನ್ಯಾಸ ಎಂಜಿನಿಯರ್‌ಗಳಲ್ಲಿ ಈಗಾಗಲೇ ಶೇ.20ರಷ್ಟು ಭಾರತೀಯರಾಗಿದ್ದಾರೆ. ಇಂದು ನಾವು 2 ನ್ಯಾನೋಮೀಟರ್‌ನಷ್ಟು ಸಣ್ಣ ಚಿಪ್‌ಗಳನ್ನು ನಮ್ಮ ದೇಶದಲ್ಲಿ ವಿನ್ಯಾಸಗೊಳಿಸುತ್ತಿದ್ದೇವೆ” ಎಂದು ಐಟಿ ಸಚಿವರು ಹೇಳಿದ್ದಾರೆ.
“ಹಿಂದೆ 5 ನ್ಯಾನೋಮೀಟರ್, 7 ನ್ಯಾನೋಮೀಟರ್ ಚಿಪ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿತ್ತು. ಆದರೆ ಈಗ 2 ನ್ಯಾನೋಮೀಟರ್‌ನಂತಹ ಅತ್ಯಂತ ಸಂಕೀರ್ಣವಾದ ಚಿಪ್‌ಗಳನ್ನು ಭಾರತದಲ್ಲಿ ವಿನ್ಯಾಸ ಮಾಡಲಾಗುತ್ತಿದೆ,” ಎಂದು ಅವರು ಹೆಮ್ಮೆಯಿಂದ ನುಡಿದಿದ್ದಾರೆ.
“ಚಿಪ್ ತಯಾರಿಕೆಯ ಸಂಕೀರ್ಣತೆ”
ದೇಶಿ ನಿರ್ಮಿತ ಚಿಪ್ ವೇಫರ್ ಅನ್ನು ಕೈಯಲ್ಲಿ ಹಿಡಿದು ವಿವರಿಸಿದ ಅವರು, “ಚಿಪ್ ತಯಾರಿಕೆಯು ಅತ್ಯಂತ ಸಂಕೀರ್ಣ ಉದ್ಯಮವಾಗಿದೆ. ಚಿಪ್ ಅನ್ನು ಸೂಕ್ಷ್ಮದರ್ಶಕದಿಂದಲೂ ನೋಡಲಾಗುವುದಿಲ್ಲ, ಅದು ಮಾನವನ ಕೂದಲಿಗಿಂತ 10,000 ಪಟ್ಟು ಚಿಕ್ಕದಾಗಿದೆ. ಒಂದು ಸಣ್ಣ ವೇಫರ್ ಮೇಲೆ ಇಡೀ ನಗರವನ್ನು ನಿರ್ಮಿಸಿದಂತೆ; ಅದಕ್ಕೆ ತನ್ನದೇ ಆದ ಪ್ಲಂಬಿಂಗ್, ಹೀಟಿಂಗ್, ಎಲೆಕ್ಟ್ರಿಕಲ್ ನೆಟ್‌ವರ್ಕ್ ಮತ್ತು ಸರ್ಕ್ಯೂಟ್‌ಗಳು ಇರುತ್ತವೆ. ಇದು ಅತ್ಯಂತ ಸಂಕೀರ್ಣ ವಿಷಯವಾಗಿದೆ” ಎಂದು ತಿಳಿಸಿದ್ದಾರೆ.