ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಗೆ (Darshan) ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ ನಲ್ಲಿ ವಾಸಿಸುತ್ತಿದ್ದ ದರ್ಶನ್ ಮನೆ ತೂಗುದೀಪ್ ನಿವಾಸಕ್ಕೂ ಈಗ ಸಂಚಕಾರ ಬಂದಿದೆ. 2016ರಲ್ಲಿ ರಾಜ ಕಾಲುವೆ ಒತ್ತುವರಿ (Raja Kaluve Encroachment) ತೆರವಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಈ ಸಂದರ್ಭದಲ್ಲಿ ಬಿಬಿಎಂಪಿ ಒತ್ತುವರಿ ಮಾಡಿಕೊಂಡ ಕಟ್ಟಡಗಳ ಪಟ್ಟಿ ಬಿಡುಗಡೆ ಮಾಡಿತ್ತು. ದರ್ಶನ್ ನಿವಾಸ ಕೂಡ ರಾಜಕಾಲುವೆಯ ಬಫರ್ ಝೋನ್ ಮೇಲೆ ನಿರ್ಮಾಣವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಆದರೆ, ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ದರ್ಶನ್ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಆರ್.ಆರ್ ನಗರದಲ್ಲಿ ಒಟ್ಟು 70 ಕಡೆ ಒತ್ತುವರಿ ಆಗಿರುವುದು ಪತ್ತೆಯಾಗಿತ್ತು. ಈಗ ಮತ್ತೆ ಹಳೆಯ ಪ್ರಕರಣಗಳನ್ನು ಕೆದಕಲು ಬಿಬಿಎಂಪಿ ಮುಂದಾಗಿದೆ. ಒಂದು ವೇಳೆ ಕೋರ್ಟ್ ತಡೆಯನ್ನು ತೆರವುಗೊಳಿಸಿದರೆ ದರ್ಶನ್ ಮನೆಗೆ ಉರುಳಿ ಬೀಳುವುದರಲ್ಲಿ ಎರಡು ಮಾತಿಲ್ಲ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಹತ್ಯೆಯ ನಂತರದಲ್ಲಿ ನಟ ದರ್ಶನ್ ಮಾಡಿದ್ದಾರೆ ಎನ್ನಲಾಗುತ್ತಿರುವ ಹಿಂದಿನ ಒಂದೊಂದೇ ಅವಾಂತರಗಳು ಮೇಲೆದ್ದು ಬರುತ್ತಿವೆ. ಹಿಂಸೆ/ಅನ್ಯಾಯಕ್ಕೊಳಗಾದವರು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇನ್ನು ಆ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯ ದಿನ-ದಿನಕ್ಕೆ ಪುಷ್ಟಿ ಪಡೆಯುತ್ತಿದೆ. ಕೇಸಿನ ಇನ್ವೆಸ್ಟಿಗೇಷನ್ “ವಾಟರ್ ಟೈಟ್” ಆಗುತ್ತಿರುವ ಈ ಹೊತ್ತಲ್ಲಿ ರಾಜರಾಜೇಶ್ವರಿ ನಗರದ ಮನೆಯೂ ಧರೆಗುರುಳುವ ಕಾಲಬಂದಂತಿದೆ. ಏನೇ ಹೇಳಿ, ಸಮಯ ಕೆಟ್ಟರೇ, ಎಲ್ಲವೂ ಪಾಶವಾಗಿ ಸುತ್ತಿಕೊಳ್ಳುತ್ತೆ ಎನ್ನುವಂತೆ, ಸದ್ಯ ದರ್ಶನ್ ಪರಿಸ್ಥಿತಿಗೆ ಹಗ್ಗವೂ ಹಾವಿನಂತೆ ಭಾಸವಾಗುತ್ತಿದೆ. ಆ ಒಂದು ಕೇಸಿನ ಸುತ್ತಲೂ ಹಲವು ಹುತ್ತಗಳು ಬೆಳೆಯುತ್ತಿದೆ. ಕಾಲವೇ ಇದಕ್ಕೆ ಸಾಕ್ಷಿಯಾಗುತ್ತಿದೆ.
