ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗಲೇ ಅವರ ಬಹು ನಿರೀಕ್ಷಿತ ಸಿನಿಮಾ‘ದಿ ಡೆವಿಲ್’ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಅಭಿಮಾನಿಗಳು ಹಾಗೂ ದರ್ಶನ್ ಕುಟುಂಬದ ಸದಸ್ಯರು ಸೇರಿ ಪ್ರಚಾರ ಕೆಲಸವನ್ನು ಮಾಡಿದ್ದರು. ಇಷ್ಟು ದಿನಗಳ ಕಾಲ ಬಹುತೇಕ ಮೌನವಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈಗ ಮೌನ ಮುರಿದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಂದರ್ಶನವೊಂದನ್ನು ನೀಡಿದ್ದಾರೆ.
ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ. ನಟಿ ರಚನಾ ರೈ ಅವರು ಈ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ವಿಷಯಗಳ ಬಗ್ಗೆ ಅವರು ಮೌನ ಮುರಿದಿದ್ದಾರೆ. ದರ್ಶನ್ ಬದುಕಿನಲ್ಲಿ ಆದ ಕಹಿ ಘಟನೆಗಳ ಬಗ್ಗೆಯೂ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ಅಲ್ಲದೇ, ದರ್ಶನ್ ಅಭಿಮಾನಿಗಳ ಕುರಿತು ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಶನದ ಪ್ರೋಮೋ ಹಂಚಿಕೊಳ್ಳಲಾಗಿದ್ದು, ಸದ್ಯದಲ್ಲೇ ಪೂರ್ತಿ ಸಂದರ್ಶನದ ವಿಡಿಯೋ ಬಿಡುಗಡೆ ಆಗಲಿದೆ. ಕೆಲವು ಮುಖ್ಯವಾದ ಪ್ರಶ್ನೆಗಳಿಗೆ ವಿಜಯಲಕ್ಷ್ಮಿ ದರ್ಶನ್ ಅವರು ನೇರ ಉತ್ತರ ನೀಡಿದ್ದಾರೆ. ‘ದಿ ಡೆವಿಲ್ ಸಿನಿಮಾದ ಯಶಸ್ಸಿನಿಂದ ಬಹಳ ಖುಷಿ ಆಗುತ್ತಿದೆ. ದರ್ಶನ್ ಇಲ್ಲದೇ ಇದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಮತ್ತು ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ ಎಂಬುದಕ್ಕೆ ಇದು ಒಂದು ಉದಾಹರಣೆ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಸಂದರ್ಶನದ ಪ್ರೋಮೋ:
ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ ದರ್ಶನ್ ಬದುಕಿನಲ್ಲಿ ಒಂದು ಶಾಕಿಂಗ್ ಘಟನೆ ಎದುರಾಯಿತು. ಆ ಬಗ್ಗೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮಿ ಅವರು, ‘ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ನಾವು ಅದನ್ನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ. ‘ಜನರು ನೆಗೆಟಿವ್ ಆಗಿ ಮಾತನಾಡಿದರೆ ನನಗೆ ಪರಿಣಾಮ ಬೀರಲ್ಲ. ಯಾಕೆಂದರೆ ಶೇಕಡ 90ರಷ್ಟು ಜನರು ಪ್ರೀತಿ ತೋರಿಸಿದ್ದಾರೆ. ಅದು ಸಾಕು. ನೆಗೆಟಿವ್ ಕಮೆಂಟ್ಗಳನ್ನು ನಾನು ಓದುವುದೇ ಇಲ್ಲ’ ಎಂದಿದ್ದಾರೆ ವಿಜಯಲಕ್ಷ್ಮಿ ದರ್ಶನ್.
‘ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದು ದರ್ಶನ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಎಂದು ಹೇಳೋಣ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಲಯಾಳಂ ಜನಪ್ರಿಯ ನಟ ಅಖಿಲ್ ವಿಶ್ವನಾಥ್ ಸಾವು : ಕಂಬನಿ ಮಿಡಿದ ಚಿತ್ರರಂಗದ



















