ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾನೆ. ನೋವಿನಲ್ಲೂ ಕುಟುಂಬಸ್ಥರು ಯುವಕನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಅಂಗಾಂಗ ದಾನದಿಂದಾಗಿ 13 ಜೀವಗಳಿಗೆ ಬೆಳಕು ನೀಡಿದ್ದಾನೆ. ದರ್ಶನ್ ಕುಂಬಾರ್ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ. ಮೂಲತಃ ದಾವಣಗೆರೆಯ ಗುಡಾಳ ಗ್ರಾಮದ ಯುವಕ ದರ್ಶನ್, ಬೆಂಗಳೂರಿನ ನಾಯಂಡಹಳ್ಳಿ ಹತ್ತಿರ ಮಾರ್ಚ್ 22ರಂದು ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿತ್ತು. ಘಟನೆಯಲ್ಲಿ ದರ್ಶನ್ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. 24 ಗಂಟೆಗಳ ಕಾಲ ಐಸಿಯುನವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ದರ್ಶನ್ ಬ್ರೈನ್ ಡೆಡ್ ಆದ ವಿಚಾರವನ್ನು ಕುಟುಂಬಸ್ಥರಿಗೆ ವೈದ್ಯರು ತಿಳಿಸಿ, ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು.
ಮಗನ ಕಳೆದುಕೊಂಡ ನೋವಿನಲ್ಲಿದ್ದ ತಾಯಿ ಮತ್ತು ಕುಟುಂಬಸ್ಥರು, ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಮಗ ಬೇರೆಯವರ ಜೀವನದಲ್ಲಿ ಬೆಳಕಾಗಲಿ ಎಂದು ಕುಟುಂಬಸ್ಥರು ನಿರ್ಧರಿಸಿದ್ದು, ಈಗ ಸಮಾಜಕ್ಕೆ ಮಾದರಿಯಾಗಿದ್ದಾರೆ.