ಬೆಂಗಳೂರು: ದರ್ಶನ್ ಪ್ರಕರಣ ತುಂಬಾ ನೋವು ತಂದಿದೆ. ಕಾನೂನು ಕೈಗೆತ್ತಿಕೊಳ್ಳಬಾರದಿತ್ತು. ದರ್ಶನ್ (Actor Darshan) ಪೊಲೀಸರಿಗೆ ದೂರು ನೀಡಿ ರೇಣುಕಾಸ್ವಾಮಿಗೆ (Renukaswamy) ಬುದ್ಧಿ ಹೇಳಿಸಬೇಕಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಲೆ ಮಾಡಿರುವುದು ದೊಡ್ಡ ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಎಲ್ಲರೂ ಸಮಾನರು. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.
ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಚನ್ನಗಿರಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರಿಗೆ ಕಪಾಳ ಮೋಕ್ಷವಾಗಿದೆ. ಕಾನೂನು ಪೊಲೀಸರ ಹಿಡಿತದಲ್ಲೇ ಇಲ್ಲ. ಆದ್ದರಿಂದ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚುಮರೆ ಮಾಡುತ್ತಿದ್ದಾರೆ. ನಾವು ಕರ್ನಾಟಕದಲ್ಲಿದ್ದೇವೆಯೇ ಹೊರತು ಜಮ್ಮು ಮತ್ತು ಕಾಶ್ಮೀರದಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇಂತಹ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ ಎಂದು ಹೇಳಿದ್ದಾರೆ.
