ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಎ2 ಆರೋಪಿ ಆಗಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಜೈಲು ಸೇರಿದ ದರ್ಶನ್, ಅಲ್ಲಿಯೂ ರೌಡಿಶೀಟರ್ಗಳ ಸಹವಾಸ ಮಾಡಿದ್ದಾರಾ ಎಂಬ ಅನುಮಾನ ಈಗ ಮೂಡುತ್ತಿದ್ದು, ಈ ಕುರಿತ ಫೋಟೋವೊಂದು ವೈರಲ್ ಆಗಿದೆ.
ಈ ಫೋಟೋ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ವೈರಲ್ ಆದ ಫೋಟೋದಲ್ಲಿ ದರ್ಶನ್ ಅವರು ರೌಡಿಶೀಟರ್ ನಾಗನ ಜೊತೆ ಕುಳಿತು ಸಿಗರೇಟ್ ಸೇದುತ್ತಾ ಇರುವುದು ಕಾಣಿಸಿದೆ. ದರ್ಶನ್ ಜೊತೆ ಫೋಟೋದಲ್ಲಿ ಕಂಡು ಬಂದಿರುವುದು ನಟೋರಿಯಸ್ ಕ್ರಿಮಿನಲ್ ವಿಲ್ಸನ್ ಗಾರ್ಡನ್ ನಾಗ.
ವಿಲ್ಸನ್ ಗಾರ್ಡನ್ ನಾಗ ಎಂಬ ಆತ ಬೆಂಗಳೂರು ದಕ್ಷಿಣ ವಿಭಾಗದ ರೌಡಿಶೀಟರ್. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ನಾಗ ಜೈಲಿನಲ್ಲಿದ್ದಾನೆ. ಕಳೆದ ಆಗಸ್ಟ್ ನಲ್ಲಿ ಕೋರ್ಟ್ ಗೆ ವಿಲ್ಸನ್ ಗಾರ್ಡನ್ ನಾಗ ಶರಣಾಗಿದ್ದ. ನಾಗನ ವಿರುದ್ಧ ಕೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿತ್ತು. ದರ್ಶನ್ ಜೈಲಿಗೆ ಹೋದಾಗ ವಿಲ್ಸನ್ ಗಾರ್ಡನ್ ನಾಗನ ಭೇಟಿಗೆ ಮುಂದಾಗಿದ್ದರು. ಈಗ ನಾಗನ ಜೊತೆ ಟೀ, ಸಿಗರೇಟ್ ಶೇರ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.
ವೈರಲ್ ಆಗಿರುವ ಫೋಟೋದಲ್ಲಿ ದರ್ಶನ್ ಪಕ್ಕದಲ್ಲೇ ಕುಳಿತಿರುವ ಮತ್ತೊಬ್ಬ ಆರೋಪಿ ನಾಗರಾಜ್. ಈತ ದರ್ಶನ್ ಮ್ಯಾನೇಜರ್. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 11ನೇ ಆರೋಪಿಯಾಗಿ ನಾಗರಾಜ್ ಜೈಲು ಸೇರಿದ್ದಾನೆ. ದರ್ಶನ್ ಮಾಡುವ ಪಾರ್ಟಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಈಗ ಜೊತೆಗಿರುತ್ತಿದ್ದ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ವೇಳೆ ಕಾಲಿನಿಂದ ಒದ್ದಿದ್ದು ಇದೇ ನಾಗ. ಹೀಗಾಗಿ ಈತ ಕೂಡ ಈ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸ್ಪೆಷಲ್ ಬ್ಯಾರಕ್ನಿಂದ ಆಚೆ ಕುಳಿತಿರುವ ಕೊಲೆ ಆರೋಪಿ ದರ್ಶನ್, ವಿಲ್ಸನ್ ಗಾರ್ಡನ್ ನಾಗ ಹಾಗೂ ಸಹಚರರು ಸಿಗರೇಟ್, ಟೀ ಕಪ್ ಹಿಡಿರುವುದು ತಿಳಿದು ಬಂದಿದೆ. ದರ್ಶನ್ ಮಂದಹಾಸ ಬೀರುತ್ತಾ, ಚೇರ್ ಮೇಲೆ ಕುಳಿತು ಹಾಯಾಗಿ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ.
ದರ್ಶನ್, ವಿಲ್ಸನ್ ಗಾರ್ಡನ್ ನಾಗ ಮತ್ತು ಮ್ಯಾನೇಜರ್ ನಾಗರಾಜ್ ಜೊತೆ ಇರುವ ಮತ್ತೋರ್ವ ವ್ಯಕ್ತಿ ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನಾ. ಈತ ಕೂಡ ರೌಡಿಶೀಟರ್! ಕೋಣನಕುಂಟೆ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಕುಳ್ಳ ಸೀನಾ ತಲಘಟ್ಟಪುರ ಠಾಣಾ ವ್ಯಾಪ್ತಿಯ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾನೆ. ಈಗ ಈ ಫೋಟೋ ಕಂಡು ಆಕ್ರೋಶ ವ್ಯಕ್ತವಾಗುತ್ತಿದೆ. ಪರಪ್ಪನ ಅಗ್ರಹಾರ ಸೇರಿದಂತೆ ಜೈಲಿನಲ್ಲಿ ಉಳ್ಳವರಿಗೆ ಎಲ್ಲ ಸೌಲತ್ತು ಸಿಗಲಿದೆ ಎಂಬ ಅನುಮಾನಕ್ಕೆ ಮತ್ತಷ್ಟು ಇಂಬು ನೀಡಿದೆ.