ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಮತ್ತೆ ಜೈಲೇ ಗತಿ ಎನ್ನಲಾಗಿದೆ.
ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ನಿರಾಸೆಯಾಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಅ. 8ಕ್ಕೆ ಮುಂದೂಡಿದೆ. ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಇಂದು ಕೂಡ ಸುದೀರ್ಘ ವಾದ ಮಂಡಿಸಿದರು. ಪ್ರತಿವಾದಕ್ಕೆ ಎಸ್ ಪಿಪಿ ಅವಕಾಶ ಕೇಳಿದರು. ಹೀಗಾಗಿ ವಿಚಾರಣೆಯನ್ನು ಮಂಗಳವಾರಕ್ಕೆ ಕೋರ್ಟ್ ಮುಂದೂಡಿ ಆದೇಶ ನೀಡಿತು.
ದರ್ಶನ್ ಅಷ್ಟೇ ಅಲ್ಲದೇ, ಪ್ರಕರಣದ ಮತ್ತಿತರ ಆರೋಪಿಗಳಾದ ಪವಿತ್ರಾಗೌಡ ಮತ್ತು ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಯನ್ನೂ ಮಂಗಳವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಮಂಗಳವಾರದವರೆಗೂ ದರ್ಶನ್ ಜಾಮೀನು ಇಲ್ಲ ಎನ್ನುವಂತಾಗಿದೆ.
ಇನ್ನೊಂದೆಡೆ ದರ್ಶನ್ ಗೆ ಬೆನ್ನು ನೋವು ಹೆಚ್ಚಾಗಿದೆ. ಅವರಿಗೆ ಕುಳಿತುಕೊಳ್ಳಲು ಹಾಗೂ ಮಲಗಲೂ ಆಗದಷ್ಟು ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದಾರೆ. ಆದರೆ, ದರ್ಶನ್ ಮಾತ್ರ ಬಳ್ಳಾರಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಮುಂದಾಗುತ್ತಿಲ್ಲ. ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪೊಲೀಸರು ಹೈರಾಣಾಗಿದ್ದಾರೆ. ದರ್ಶನ್ ಗೆ ಜೈಲಿನಿಂದ ಯಾವಾಗ ಮುಕ್ತಿ ಸಿಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.