ವಾಷಿಂಗ್ಟನ್: ಯುದ್ಧದ ನಡುವೆಯೇ ಇರಾನ್ ವಾಯುಗಡಿಯೊಳಗೆ ನುಗ್ಗಿ ಅಮೆರಿಕದ ವಿಶೇಷ ಪಡೆಗಳು ಅತ್ಯಂತ ಸಾಹಸಮಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವ ಮೂಲಕ ತನ್ನ ಪೈಲಟ್ ಅನ್ನು ರಕ್ಷಿಸಿ ಕರೆದೊಯ್ದಿವೆ ಎಂದು ಹೇಳಲಾಗಿದೆ. ಇರಾನ್‌ನಿಂದ ಹೊಡೆದುರುಳಿಸಲ್ಪಟ್ಟ ಎಫ್-15 ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನದ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಅಧಿಕಾರಿಯನ್ನು (WSO) ರಕ್ಷಿಸುವಲ್ಲಿ ಯಶಸ್ವಿಯಾಗಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಮಾಹಿತಿ ನೀಡಿದ್ದು, “ನಾವು ಅವರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ” ಎಂದು ಘೋಷಿಸಿದ್ದಾರೆ.

ಶುಕ್ರವಾರ ಇರಾನ್ ಪಡೆಗಳು ಅಮೆರಿಕದ ಎಫ್-15 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದವು. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಪಾರಾಗಿದ್ದರಾದರೂ, ಅವರು ಇರಾನ್‌ನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ಪತ್ತೆಹಚ್ಚಲು ಅಮೆರಿಕದ ಮಿಲಿಟರಿ ಡಜನ್‌ಗಟ್ಟಲೆ ಅತ್ಯಾಧುನಿಕ ವಿಮಾನಗಳು ಮತ್ತು ನೂರಾರು ವಿಶೇಷ ಕಮಾಂಡೋಗಳನ್ನು ಕಣಕ್ಕಿಳಿಸಿತ್ತು. ಅಲ್ ಜಜೀರಾ ವರದಿಯ ಪ್ರಕಾರ, ಈ ಕಾರ್ಯಾಚರಣೆಯು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅಮೆರಿಕದ ಪಡೆಗಳು ಮತ್ತು ಇರಾನಿ ಸೈನಿಕರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಈ ಸಂಘರ್ಷದ ನಡುವೆಯೇ ಅಮೆರಿಕದ ಏರ್‌ಮನ್ ಅನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಗಿದೆ.
ಸಿಐಎ ಹೂಡಿದ ಚಾಣಾಕ್ಷ ತಂತ್ರ
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಪೈಲಟ್ ಅನ್ನು ಹುಡುಕುವ ಮುನ್ನ ಸಿಐಎ ಇರಾನ್‌ನೊಳಗೆ ಒಂದು ಸುಳ್ಳು ಸುದ್ದಿಯನ್ನು ಹಬ್ಬಿಸಿತ್ತು. ಅಮೆರಿಕದ ಪಡೆಗಳು ಈಗಾಗಲೇ ಪೈಲಟ್ ಅನ್ನು ಪತ್ತೆಹಚ್ಚಿ ರಕ್ಷಿಸಿವೆ ಎಂಬ ಸುಳ್ಳು ಮಾಹಿತಿಯನ್ನು ರವಾನಿಸುವ ಮೂಲಕ ಇರಾನ್ ಪಡೆಯ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಸಿಐಎ ಯಶಸ್ವಿಯಾಯಿತು. ಈ ತಂತ್ರಗಾರಿಕೆಯಿಂದಾಗಿ ನಿಜವಾದ ರಕ್ಷಣಾ ಕಾರ್ಯಾಚರಣೆಗೆ ಹಾದಿ ಸುಗಮವಾಯಿತು.
‘ಜೋಲಿ ಗ್ರೀನ್’ ಹೆಲಿಕಾಪ್ಟರ್‌ನ ಪರಾಕ್ರಮ
ಈ ಇಡೀ ಕಾರ್ಯಾಚರಣೆಯಲ್ಲಿ ಸಿಕೋರ್ಸ್ಕಿ ಎಚ್ಎಚ್-60ಡಬ್ಲ್ಯು ‘ಜೋಲಿ ಗ್ರೀನ್ II’ ಹೆಲಿಕಾಪ್ಟರ್ ಪ್ರಮುಖ ಪಾತ್ರ ವಹಿಸಿತ್ತು. ಇದನ್ನು ‘ಬೀಸ್ಟ್’ (ಮೃಗ) ಎಂದೇ ಕರೆಯಲಾಗುತ್ತಿದ್ದು, ಇದು ಯುದ್ಧಭೂಮಿಯ ರಕ್ಷಣಾ ಕಾರ್ಯಾಚರಣೆಗಾಗಿಯೇ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹೆಲಿಕಾಪ್ಟರ್ ಆಗಿದೆ. ಇದರೊಂದಿಗೆ ಎ-10 ವಾರ್ತಾಗ್ ಯುದ್ಧ ವಿಮಾನಗಳು ಮತ್ತು ಎಫ್-35 ಸ್ಟೆಲ್ತ್ ವಿಮಾನಗಳು ಇರಾನ್‌ನ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಮೆಟ್ಟಿ ನಿಂತು ಪೈಲಟ್‌ಗೆ ರಕ್ಷಣೆ ನೀಡಿದವು. ಇರಾನ್‌ನ ಸೈನಿಕರು ಅಮೆರಿಕದ ಸೈನಿಕರನ್ನು ಸೆರೆಹಿಡಿಯಲು 66,000 ಡಾಲರ್ ಬಹುಮಾನ ಘೋಷಿಸಿದ್ದರೂ, ಅಮೆರಿಕದ ತಂತ್ರಜ್ಞಾನದ ಮುಂದೆ ಅದು ವಿಫಲವಾಯಿತು.
ವಾಯು ಮೇಲರಿಮೆಯ ಪ್ರದರ್ಶನ ಎಂದ ಟ್ರಂಪ್
ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್ ಸೋಶಿಯಲ್’ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಾಕಿರುವ ಅಧ್ಯಕ್ಷ ಟ್ರಂಪ್, “ನಮ್ಮ ಪಡೆಗಳು ಇರಾನ್ ಆಕಾಶದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿವೆ ಎಂಬುದಕ್ಕೆ ಈ ಕಾರ್ಯಾಚರಣೆಯೇ ಸಾಕ್ಷಿ. ಶತ್ರು ದೇಶದ ಆಳಕ್ಕೆ ಹೋಗಿ ಇಬ್ಬರು ಪೈಲಟ್‌ಗಳನ್ನು ಪ್ರತ್ಯೇಕವಾಗಿ ರಕ್ಷಿಸಿದ್ದು ಮಿಲಿಟರಿ ಇತಿಹಾಸದಲ್ಲೇ ಮೊದಲು,” ಎಂದು ಬಣ್ಣಿಸಿದ್ದಾರೆ. ರಕ್ಷಿಸಲ್ಪಟ್ಟ ಅಧಿಕಾರಿ ಈಗ ಸುರಕ್ಷಿತವಾಗಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.



















