ಆನೇಕಲ್ | ಸಿಲಿಕಾನ್ ಸಿಟಿ ಹೊರವಲದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಕಳೆದ ಫೆಬ್ರವರಿ 1ರಂದು ಸಿನಿಮಾ ಸ್ಟೈಲ್ನಲ್ಲಿ ಬೈಕ್ ಅಡ್ಡಗಟ್ಟಿ 31 ಲಕ್ಷ ಹಣ ರಾಬರಿ ನಡೆಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 10 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯದ ಆಧಾರದಲ್ಲಿ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಉಡಾನ್ ಕಂಪನಿಯ ಬ್ರಾಂಚ್ಗಳಲ್ಲಿ ಹಣ ಕಲೆಕ್ಷನ್ ಮಾಡಿಕೊಂಡು ಹೋಗುತ್ತಿದ್ದ ಪ್ರೈವೇಟ್ ಏಜೆನ್ಸಿಯ ಸಿಬ್ಬಂದಿ ಶ್ರೀಕೈಲಾಸ್ ಎಂಬವರನ್ನು 2 ಬೈಕ್ಗಳಲ್ಲಿ ಹಿಂಬಾಲಿಸಿದ್ದ ನಾಲ್ವರು ದುಷ್ಕರ್ಮಿಗಳ ತಂಡ, ಬೈಕ್ ಅಡ್ಡಗಟ್ಟಿ 31,38,625 ರೂ. ಹಣವನ್ನ ರಾಬರಿ ಮಾಡಿ ಎಸ್ಕೇಪ್ ಆಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿಗಳ ಬಂಧನಕ್ಕೆ 3 ತಂಡಗಳನ್ನ ರಚನೆ ಮಾಡಿದ್ದರು. ಇದೀಗ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್ ಸೇರಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ : ರಾಜಧಾನಿ ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ.. ಕೂಲ್ ಕೂಲ್ ವೆದರ್!



















