ಬೆಂಗಳೂರು | ನಗರದ ಸದಾಶಿವನಗರ ಪೊಲೀಸರು ಖತರ್ನಾಕ್ ಮದುವೆ ಮನೆ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡ ದೊಡ್ಡ ಮದುವೆ ಚೌಟ್ರಿಗಳು ಮತ್ತು ಫಂಕ್ಷನ್ ಹಾಲ್‌ಗಳೇ ಈತನ ಟಾರ್ಗೆಟ್ ಆಗಿದ್ದು, ಕಳ್ಳತನ ಮಾಡಲು ಬಂದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಚನ್ನಪಟ್ಟಣ ಮೂಲದ ಬಾಬು ಅಲಿಯಾಸ್ ಪಲ್ಸರ್ ಬಾಬು ಎಂದು ಗುರುತಿಸಲಾಗಿದೆ. ಈಗಾಗಲೇ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ, ಐಷಾರಾಮಿ ಜೀವನ ಮತ್ತು ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದನು. ಪದೇ ಪದೇ ಜೈಲು ಸೇರಿದರೂ ತನ್ನ ಚಟವನ್ನು ಬಿಟ್ಟುಬಿಡದೆ ಮತ್ತೆ ಮತ್ತೆ ಅಪರಾಧಕ್ಕೆ ಇಳಿಯುತ್ತಿದ್ದ.
ಕೊರೋನಾ ಸಂದರ್ಭದಲ್ಲಿ ಸಣ್ಣಪುಟ್ಟ ಪ್ರಕರಣಗಳ ಆರೋಪಿಗಳನ್ನು ಬಿಡುಗಡೆ ಮಾಡಿದಾಗ ಈತನಿಗೂ ಅವಕಾಶ ಸಿಕ್ಕಿತ್ತು. ಜೈಲಿನಿಂದ ಹೊರಬಂದ ಬಳಿಕವೂ ಪಲ್ಸರ್ ಬಾಬು ತನ್ನ ಕಳ್ಳತನದ ಚಟವನ್ನು ಮುಂದುವರೆಸಿದ್ದು, ಮದುವೆ ಮನೆಗಳನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದ. ವಿಶೇಷವಾಗಿ ಚಿಕ್ಕ ಮಕ್ಕಳ ಬಳಿ ಇರುವ ಚಿನ್ನಾಭರಣ ಮತ್ತು ಮೊಬೈಲ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ.
ಇದರ ಜೊತೆಗೆ ಮದುವೆ ಮನೆಗಳಲ್ಲಿ ಇರುವ ಕ್ಯಾಮೆರಾ, ಲ್ಯಾಪ್‌ಟಾಪ್, ಬೈಕ್‌ಗಳನ್ನೂ ಕಳವು ಮಾಡುತ್ತಿದ್ದನು. ಕದ್ದ ಚಿನ್ನವನ್ನು ಕರಗಿಸಿ ತನ್ನ ಇಷ್ಟದ ಆಭರಣಗಳನ್ನು ತಯಾರಿಸಿಕೊಂಡು ತಿರುಪತಿ ಲಾಕೆಟ್, ಉಂಗುರಗಳ ಮೂಲಕ ಶೋಕಿ ಮಾಡುತ್ತಿದ್ದ. ಕಳ್ಳತನದ ಹಣದಿಂದ ಕಾರು ಖರೀದಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದನು.
ಪೊಲೀಸರು ಬಂಧಿತನಿಂದ ಸುಮಾರು 42.38 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್, 1 ಕ್ಯಾಮೆರಾ, 2 ಲೆನ್ಸ್, 2 ಲ್ಯಾಪ್‌ಟಾಪ್, 1.20 ಲಕ್ಷ ನಗದು ಮತ್ತು 4 ಬೈಕ್‌ಗಳು ಸೇರಿವೆ. ಈ ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಾಗಲಗುಂಟೆ ಸೇರಿದಂತೆ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ ; ಆಕಸ್ಮಿಕವಾಗಿ ಹೊತ್ತಿ ಉರಿದ 300ಕ್ಕೂ ಹೆಚ್ಚು ಭತ್ತದ ಚೀಲ


















