ಬೆಂಗಳೂರು : ಕಳೆದ ಶನಿವಾರ ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಮತ್ತು ಕಬ್ಬನ್ ಪೇಟೆಯ ಹೆಚ್.ಡಿ.ಎಫ್.ಸಿ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಸಿದ್ದ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶೇಷಾದ್ರಿಪುರಂ ನಿವಾಸಿ ಹಸನ್ ಸಾಬ್ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಹಸನ್ ಸಾಬ್, ಶೇಷಾದ್ರಿಪುರಂನ ಕೆನರಾ ಬ್ಯಾಂಕ್‌ನ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿದ್ದನು. ಆದರೆ, ಬ್ಯಾಂಕ್‌ನಲ್ಲಿದ್ದ ಸೆಕ್ಯೂರಿಟಿ ಸೈರನ್ ಮೊಳಗುತ್ತಿದ್ದಂತೆ ಗಾಬರಿಗೊಂಡು ಏನನ್ನೂ ಕದಿಯಲಾಗದೆ ಅಲ್ಲಿಂದ ಓಡಿ ಹೋಗಿದ್ದನು.
ಇದರ ನಂತರ ಆರೋಪಿಯು ಕಬ್ಬನ್‌ಪೇಟೆಯಲ್ಲಿರುವ ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂನಲ್ಲೂ ಕಳ್ಳತನ ಯತ್ನಿಸಿದ್ದ. ಸದ್ಯ ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಹಸನ್ ಸಾಬ್ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, “ತನ್ನ ಮೇಲಿರುವ ಸಾಲವನ್ನು ತೀರಿಸಲು ಬೇರೆ ದಾರಿ ಕಾಣದೆ ಈ ಕಳ್ಳತನಕ್ಕೆ ಕೈ ಹಾಕಿದ್ದೆ” ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ, ಈ ಹಿಂದೆ ಬೇರೆ ಯಾವುದಾದರೂ ಕೃತ್ಯಗಳಲ್ಲಿ ಭಾಗವಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಶುಚಿತ್ವ ಲೋಪ, ನಿಷೇಧಿತ ಪ್ಲಾಸ್ಟಿಕ್ ಬಳಕೆ | ‘ಅಲ್-ಫಾಜ್’ ಹೋಟೆಲ್‌ಗೆ ಬಿತ್ತು 75 ಸಾವಿರ ದಂಡ!



















