ತುಮಕೂರು | ನಗರದಲ್ಲಿ ಭಯಾನಕ ರೀತಿಯಲ್ಲಿ ಮಾಂಗಲ್ಯ ಸರ ಕಸಿದ ಘಟನೆ ನಡೆದಿದೆ. ಕ್ಯಾತಸಂದ್ರ ಪ್ರದೇಶದ ಮೈದಾಳ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ವೃದ್ಧೆ ಪಾರ್ವತಮ್ಮನ ಬಳಿ ಸಿಗರೇಟ್ ಕೇಳುವ ನೆಪದಲ್ಲಿ ಬಂದ ಕಳ್ಳ, ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಘಟನೆ ಫೆಬ್ರವರಿ 15ರಂದು ಬೆಳಗ್ಗೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ. ಬೆಳ್ಳಂಬೆಳಗ್ಗೆ ಅಂಗಡಿ ಒಪನ್ ಮಾಡುವ ಸಮಯದಲ್ಲಿ ಬಂದ ಖದೀಮ, ಸಿಗರೇಟ್ ಕೇಳುವ ನೆಪದಲ್ಲಿ ಒಳಗೆ ಬಂದು ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಪಾರ್ವತಮ್ಮ ಬೆಳಗ್ಗೆ 6:30ರ ಸುಮಾರಿಗೆ ಅಂಗಡಿ ಬಾಗಿಲು ತೆರೆದುಕೊಂಡು ಕೆಲಸ ಆರಂಭಿಸಿದ್ದರು. ಆ ಸಮಯದಲ್ಲಿ ವ್ಯಕ್ತಿ ಅಂಗಡಿಗೆ ಬಂದು ಸಿಗರೇಟ್ ಕೇಳಿದ್ದಾನೆ. ಸಹಜವಾಗಿ ಪಾರ್ವತಮ್ಮ ಸಿಗರೇಟ್ ಕೊಡಲು ಹೊರಟಾಗ, ಕಳ್ಳನು ಹಠಾತ್ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಕೈಹಾಕಿದ್ದಾನೆ. ರಭಸದಿಂದ ಸರ ಎಳೆದಿದ್ದು, ಸರ ತುಂಡಾಗಿ ಹರಡಿದೆ. ಈ ವೇಳೆ ಕಳ್ಳ ಅರ್ಧ ಭಾಗದ ಸರವನ್ನು ಮಾತ್ರ ಕಿತ್ತುಕೊಂಡು ಓಡಿ ಹೋಗಿದ್ದಾನೆ.
ಪಾರ್ವತಮ್ಮ ಈ ಸಮಯದಲ್ಲಿ ಆಘಾತದಿಂದ ಕೂಗಿಕೊಂಡಿದ್ದು, ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಕಳ್ಳ ಬಲವಾಗಿ ಎಳೆದಿದ್ದರಿಂದ ಅವರು ಬಿದ್ದು ಒದ್ದಾಡಿದರೂ ಬಿಡದೇ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಈ ಘಟನೆಯ ಸಮಯದಲ್ಲಿ ಅಂಗಡಿಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಪೂರ್ತಿ ಕೃತ್ಯ ಸೆರೆಯಾಗಿದೆ.
ವಿಡಿಯೋದಲ್ಲಿ ಅವನು ಸಿಗರೇಟ್ ಕೇಳುವ ನೆಪದಲ್ಲಿ ಬಂದು, ಹಠಾತ್ ಸರ ಕಿತ್ತು ಓಡುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆಯ ನಂತರ ಪಾರ್ವತಮ್ಮ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಳ್ಳನನ್ನು ಹುಡುಕುತ್ತಿದ್ದಾರೆ.
ಇದನ್ನೂ ಓದಿ : ಐಪಿಎಲ್ 2026 | ಗಾಯದಿಂದ ಚೇತರಿಸಿಕೊಂಡ ನಾಯಕ ರಿಷಭ್ ಪಂತ್ ಕಣಕ್ಕೆ ರೆಡಿ



















