ಯಾದಗಿರಿ : ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ನಾರಾಯಣಪುರದ ಬಸವ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿರುವ ಕಾರಣಕ್ಕೆ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಡ್ಯಾಂ ತುಂಬಿದೆ. ನಾರಾಯಣಪುರ ಡ್ಯಾಂ ನಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಕೃಷ್ಣಾ ನದಿಗೆ ಸುಮಾರು 1 ಲಕ್ಷ 60 ಸಾವಿರ ಕ್ಯೂಸೆಕ್ ನೀರನ್ನು ಡ್ಯಾಂನ 30 ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರು ಬಿಡಲಾಗಿದೆ.
ಸದ್ಯ ಡ್ಯಾಂ ಒಳಹರಿವಿನ ಪ್ರಮಾಣಕ್ಕಿಂತ ಹೆಚ್ಚಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಸದ್ಯ 33.33 ಟಿಎಂಸಿ ಸಾಮರ್ಥ್ಯವಿರುವ ಡ್ಯಾಂನಲ್ಲಿ 31.130 ಟಿಎಂಸಿ ನೀರು ಸಂಗ್ರಹವಾಗಿದೆ.



















