ಕೊಪ್ಪಳ: ದಲಿತ ಸಮುದಾಯದ ಯುವತಿಯನ್ನು ದೈಹಿಕವಾಗಿ ಹಿಂಸಿಸಿ, ವಿಷವುಣಿಸಿ ಕೊಲೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ ಮರಿಯಮ್ಮ (21) ಎಂಬ ಯುವತಿ, ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದ ಹನಮಯ್ಯ ಎಂಬ ಯುವಕನನ್ನು ಪ್ರೀತಿಸಿದ್ದರು. ಮರಿಯಮ್ಮ, ದಲಿತ ಸಮುದಾಯಕ್ಕೆ ಸೇರಿದ್ದರೆ, ಹನಮಯ್ಯ, ನಾಯಕ ಜಾತಿಗೆ ಸೇರಿದ್ದ. ಹೀಗಾಗಿ ಕುಟುಂಬಸ್ಥರು ಈ ಪ್ರೀತಿಗೆ ಒಪ್ಪಿರಲಿಲ್ಲ. ಆದರೆ, ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಜೋಡಿ ಮನೆ ಬಿಟ್ಟು ಹೋಗಿ, ಗಂಗಾವತಿ ಸಬ್ ರಿಜಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಆನಂತರ ಎರಡು ಕುಟುಂಬಸ್ಥರು ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿದ್ದರು. ನಂತರ ಮರಿಯಮ್ಮ ಗಂಡನ ಮನೆಗೆ ಹೋಗಿದ್ದರು.
ಮದುವೆ ನಂತರ, ಯುವತಿಯ ಕುಟುಂಬಸ್ಥರಿಗೆ ಹುಡುಗನ ಮನೆಯವರು ನಮ್ಮ ಮನೆಗೆ ಬರಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಯುವತಿಗೂ ಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈಗ ತಮ್ಮ ಮಗಳ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಲ್ಲದೇ, ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಯುವತಿಯ ಕುಟುಂಬಸ್ಥರು ದೂರು ನೀಡಿದ್ದಾರೆ.
ಆಗಸ್ಟ್ 27 ರಂದು ಮರಿಯಮ್ಮಳ ಕುಟುಂಬದವರಿಗೆ ಕನಕಗಿರಿ ಪೊಲೀಸರು ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಎಂದು ಹೇಳಿದ್ದರು ಎನ್ನಲಾಗಿದೆ. ಆದರೆ, ಅವರು ಬರುವುದಕ್ಕೂ ಮುನ್ನವೇ ಯುವತಿ ಸಾವನ್ನಪ್ಪಿದ್ದಾರೆ. ಈಗ ಯುವತಿಯ ಕುಟುಂಬಸ್ಥರು ಹುಡುಗ ಸೇರಿದಂತೆ ಆತನ ಮನೆಯವರ ಮೇಲೆ ಆರೋಪ ಮಾಡಿದ್ದಾರೆ.


















