ಬೆಂಗಳೂರು: ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರಾಜ್ ಅವರು ನಾಡಿನ ವಿಷಯಗಳ ಕುರಿತು ಆಗಾಗ ಧ್ವನಿಯೆತ್ತುತ್ತಲೇ ಇರುತ್ತಾರೆ. ಅದು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ರಾಜಕೀಯ ಮೇಲಾಟ ಜಾಸ್ತಿಯಾದರೆ ಅವರು ಟೀಕಿಸುತ್ತಾರೆ. ಈಗ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಆರಂಭವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಪ್ರಕಾಶ್ ರಾಜ್ (Prakash Raj) ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಂಬೇಡ್ಕರ್ ಅವರ ಹೆಸರು ಮತ ಬ್ಯಾಂಕ್ ಗಾಗಿ ಮಾತ್ರ ಎಂದು ಅವರು ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯು ದಲಿತ ಮುಖ್ಯಮಂತ್ರಿ ವಿಚಾರವಾಗಿ ಆಡುತ್ತಿರುವ ಮಾತಿನ ಹಿಂದಿನ ಮೌನವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಯಾವಾಗಲೂ ದಲಿತ ಸಿಎಂ ಆಗಬೇಕು ಎಂದಷ್ಟೇ ಹೇಳುತ್ತಾರೆ. ಆದರೆ, ಯಾಕೆ ಆಗಬೇಕು ಎಂದು ಅವರು ಕಾರಣ ಕೊಡುವುದಿಲ್ಲ. ಇದರ ಹಿಂದೆ ಎರಡೂ ಪಕ್ಷಗಳದ್ದು ಹುನ್ನಾರ ಇರುತ್ತದೆ” ಎಂದು ಮಂಗಳೂರಿನಲ್ಲಿ ಪ್ರಕಾಶ್ ರಾಜ್ ಸುದ್ದಿಗಾರರಿಗೆ ತಿಳಿಸಿದರು.
“ಕಾಂಗ್ರೆಸ್ ಹಾಗೂ ಬಿಜೆಪಿಗೆ ದಲಿತರು, ಬಡವರು ಎಂದರೆ ವೋಟು ಹಾಕುವ ಮಷೀನ್ ಗಳು ಇದ್ದಂತೆ. ವೋಟ್ ಬ್ಯಾಂಕ್ ಹೊರತು ಇವರಿಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ. ದಲಿತರು, ರೈತರ ಇವರೆಲ್ಲ ಹೆಚ್ಚು ಮಾತನಾಡುತ್ತಾರೆ. ಆದರೆ, ಇವರಿಗೆ ರೈತರು, ದಲಿತರ ಮೇಲೆ ನಿಜವಾದ ಕಾಳಜಿ ಇಲ್ಲ. ವೋಟ್ ಬ್ಯಾಂಕ್ ದೃಷ್ಟಿಯಿಂದ ಇವರು ಕಾಳಜಿ ತೋರಿಸುತ್ತಾರೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡು ಪ್ರಶ್ನೆ ಮಾಡಬೇಕು” ಎಂದು ಹೇಳಿದರು.
ಕರ್ನಾಟಕದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಚರ್ಚೆ ಶುರುವಾಗಿದೆ. ದಲಿತ ಸಿಎಂ ಆಗಬೇಕು ಎಂದು ಕಾಂಗ್ರೆಸ್ ನಲ್ಲಿರುವ ದಲಿತ ಶಾಸಕರು, ಸಚಿವರು ಒಗ್ಗಟ್ಟಾಗುತ್ತಿದ್ದಾರೆ. ದಲಿತ ಸಮಾವೇಶ ಕೂಡ ಆಯೋಜಿಸಲು ಮುಂದಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.