ಕೊಪ್ಪಳ್ಳ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು, ಬರೋಬ್ಬರಿ 98 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಐದು ವರ್ಷ ಶಿಕ್ಷೆ ವಿಧಿಸಿದೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಇಂದು ಕೋರ್ಟ್ ಸಿಕ್ಷೆ ವಿಧಿಸಿದೆ. 2014ರಲ್ಲಿ ನಡೆದ ಸವರ್ಣೀಯರು ಮತ್ತು ದಲಿತರ ಮಧ್ಯೆದ ಗಲಾಟೆ ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮೂವರು ಅಪರಾಧಿಗಳು ಎಸ್ಸಿ ಎಸ್ಟಿ ವರ್ಗಕ್ಕೆ ಸೇರಿದ್ದರಿಂದ ಆ ಆರೋಪಿಗಳಿಗೆ ಅಟ್ರಾಸಿಟಿ ಕೇಸ್ ಅನ್ವಯಿಸುವುದಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೋಂಬಿ ಸೇರಿದಂತೆ ಇನ್ನಿತರ ಸೆಕ್ಷನ್ ನಡಿ ಐದು ವರ್ಷ ಶಿಕ್ಷೆ ಪ್ರಕಟಿಸಲಾಗಿದೆ.
ಜೀವಾವಧಿ ಶಿಕ್ಷೆಗೊಳಗಾದ 98 ಆರೋಪಿಗಳಿಗೆ ತಲಾ ಐದು ಸಾವಿರ ರೂ ಹಾಗೂ ಇನ್ನು ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ದಂಡ ವಿಧಿಸಲಾಗಿದೆ. 2014 ರ ಆಗಸ್ಟ್ 28 ರಂದು ಸವರ್ಣೀಯರು ಹಾಗೂ ದಲಿತರ ಮಧ್ಯೆ ಗಲಾಟೆ ನಡೆದಿತ್ತು. ಅಕ್ಟೋಬರ್ 21 ರಂದು ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, 101 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿ, ಇಂದು ಶಿಕ್ಷೆ ಕಾಯ್ದಿರಿಸಿತ್ತು. ಸದ್ಯ ಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಆವರಣದಲ್ಲೇ ಕಣ್ಣೀರು ಸುರಿಸಿದ್ದಾರೆ.
ಗಂಗಾವತಿ ನಗರದಲ್ಲಿನ ಶಿವ ಚಿತ್ರಮಂದಿರದಲ್ಲಿ ಮರಕುಂಬಿ ಗ್ರಾಮದ ಮಂಜುನಾಥ ಹಾಗೂ ಸ್ನೇಹಿತರು ಸಿನಿಮಾ ನೋಡಲು ಹೋಗಿದ್ದರು. ಈ ಸಂದರ್ಭದಲ್ಲಿ ಟಿಕೆಟ್ ಪಡೆಯುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಮಂಜುನಾಥ ಹಾಗೂ ಸ್ನೇಹಿತರು ನಮ್ಮೂರ ದಲಿತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದರು. ಇದು ಗಲಾಟೆಗೆ ಕಾರಣವಾಗಿತ್ತು. ಆಗ ಸವರ್ಣಿಯರು ದಲಿತರ ಕೇರಿಗೆ ನುಗ್ಗಿ ದಾಂಧಲೆ ಮಾಡಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಹಲವರ ಮೇಲೆ ಹಲ್ಲೆ ನಡೆಸಿದ್ದರು.