ಮಾಜಿ ಸಂಸದ ಡಿ.ಕೆ. ಸುರೇಶ್ ನಕಲಿ ತಂಗಿ ಐಶ್ವರ್ಯಗೌಡ ವಿರುದ್ದ ಮತ್ತೊಂದು ಪ್ರಕರಣ ದಾಖಲಾಗಿದೆ. ವೈದ್ಯೆಯೊಬ್ಬರಿಗೆ ವಂಚಿಸಿರುವ ಪ್ರಕರಣದಲ್ಲಿ ದೂರು ದಾಖಲಾಗಿದೆ
2021ರಲ್ಲಿ ಆಸ್ಪತ್ರೆಗೆ ಹೋಗಿದ್ದ ಐಶ್ವರ್ಯ ಗೌಡ, ಮಂಜುಳಾ ಎಂಬ ವೈದ್ಯರ ಪರಿಚಯ ಮಾಡಿಕೊಂಡು, ನಾನು ಡಿ.ಕೆ. ಸುರೇಶ್ ಮತ್ತು ಡಿ.ಕೆ. ಶಿವಕುಮಾರ್ ತಂಗಿ ಎಂದು ಪರಿಚಯ ಮಾಡಿಕೊಂಡಿದ್ದಾಳೆ.
ನಾನು ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅವರ ಕಸಿನೊ ನೋಡಿಕೊಳ್ಳುತ್ತೇನೆ. ಅಲ್ಲದೇ, ನನ್ನದು ಗೋಲ್ಡ್ ಬಿಜಿನೆಸ್ ಕೂಡ ಇದೆ ಎಂದು ಪರಿಚಯ ಮಾಡಿಕೊಂಡಿದ್ದಾಳೆ. ಆನಂತರ 2022ರಲ್ಲಿ ತನ್ನ ಹಣ ಸ್ಟ್ರಕ್ ಆಗಿದೆ ಎಂದು ಸುಳ್ಳು ಹೇಳಿ ಡಾ. ಮಂಜುಳಾ ಬಳಿ ಹಣ ಪಡೆದು, ಮರಳಿ ನೀಡಿದ್ದಳು. ನಂತರ ಹಂತ ಹಂತವಾಗಿ ಮಂಜುಳಾ ಬಳಿ ಹಣ ಪಡೆದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ನಂತರ ಪ್ರತಿ ತಿಂಗಳು ಇಂತಿಷ್ಟು ಪರ್ಸೆಂಟ್ ಲಾಭ ನೀಡುತ್ತೇನೆಂದು ನಂಬಿಸಿ ಹಣ ಪಡೆದಿದ್ದಾಳೆ. ಹೀಗೆ ಸುಮಾರು ಎರಡು ಕೋಟಿ ಐವತ್ತೆರಡು ಲಕ್ಷದ ಅರವತ್ತು ಸಾವಿರ ಹಣ ಮತ್ತು 2 KG 350 ಗ್ರಾಂ ಚಿನ್ನ ಪಡೆದಿದ್ದಾಳೆ. ಆದರೆ, ಇದುವರೆಗೂ ಮರಳಿ ನೀಡಿಲ್ಲ.
ಇತ್ತೀಚೆಗೆ ಐಶ್ವರ್ಯಾಗೌಡ ಬೇರೆಯವರಿಗೆ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬುರುತ್ತಿದ್ದಂತೆ ವೈದ್ಯರು, ಅವರ ಮನೆಗೆ ಹೋಗಿದ್ದಾರೆ. ಆಗ ನೀವು ಪೊಲೀಸರ ಮುಂದೆ ಹೋದರೆ, ನಿಮ್ಮ ಹಣ ಮರಳಿ ನೀಡುವುದೇ ಇಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಾನು ಡಿ.ಕೆ. ಸುರೇಶ್ ತಂಗಿ ಈಗ ಅವರು ಈ ವಿಷಯಕ್ಕೆ ಕೋಪ ಮಾಡಿಕೊಂಡಿದ್ದಾರೆ. ಮತ್ತೆ ನೀನು ಏನಾದರೂ ಮಾಡಿದರೆ ಡಿ.ಕೆ. ಸುರೇಶ್ ನಿನಗೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಹೆದರಿಸಿದ್ದಾಳೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮೋಸ ಹೋಗಿರುವ ಡಾ. ಮಂಜುಳಾ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಐಶ್ವರ್ಯಗೌಡ, ಪತಿ ಹರೀಶ್ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಮೂಲಕ ಐಶ್ವರ್ಯಗೌಡ ದಂಪತಿ ವಿರುದ್ಧ ಮಂಡ್ಯದಲ್ಲಿ ಎರಡು, ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎರಡು ಮತ್ತು ಚಂದ್ರಾ ಲೇಔಟ್ ನಲ್ಲಿ ಒಂದು ಪ್ರಕರಣ ದಾಖಲಾಗಿವೆ.