ಹುಬ್ಬಳ್ಳಿ: ಇಲ್ಲಿಯ ಉಣಕಲ್ ನ ಅಯ್ಯಪ್ಪ ದೇವಸ್ಥಾನದಲ್ಲಿ ಸಂಭವಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (18) ಸಾವನ್ನಪ್ಪಿರುವ ಮಾಲಾಧಾರಿಗಳು. ಈ ಮಾಲಾಧಾರಿಗಳು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನುಳಿದ 7 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಬಹುತೇಕ ಮಾಲಾಧಾರಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳು ದೇಗುಲದಲ್ಲಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಮಲಗಿದ್ದ ವೇಳೆ ಮಾಲಾಧಾರಿಯೊಬ್ಬರ ಕಾಲಿಗೆ ಸಿಲಿಂಡರ್ ತಾಕಿ, ಕೆಳಗೆ ಬಿದ್ದಿದೆ. ಆಗ ಗ್ಯಾಸ್ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸ್ಫೋಟಗೊಂಡಿತ್ತು. ಈ ವೇಳೆ 9 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ಮಾಲಾಧಾರಿಗಳನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ಆದರೂ ಇಬ್ಬರು ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.