ಹುಬ್ಬಳ್ಳಿ: ಇಲ್ಲಿಯ ಸಾಯಿ ನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲೆಂಡರ್ ಸ್ಫೋಟಗೊಂಡ ಪರಿಣಾಮ 10ಕ್ಕೂ ಅಧಿಕ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಾಳು ಮಾಲಾಧಾರಿಗಳನ್ನು ಕೆಎಂಸಿಆರ್ ಐಗೆ ದಾಖಲಿಸಲಾಗಿದೆ. ಎಲ್ಲರ ದೇಹ ಬಹುತೇಕ ಶೇ 90 ಕ್ಕೂ ಅಧಿಕ ಪ್ರಮಾಣದಲ್ಲಿ ಸುಟ್ಟಿದೆ ಎನ್ನಲಾಗಿದೆ. 10 ಜನರ ಪೈಕಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ.
58 ವರ್ಷದ ಅಜ್ಜಾಸ್ವಾಮಿ ಅವರ ಸ್ಥಿತಿ ಗಂಭೀರವಾಗಿದೆ. ಸಾಯಿನಗರದ ನಿವಾಸಿಗಳಾದ ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾರಕೇರ(12), ಪ್ರಕಾಶ ಬಾರಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26) ಮತ್ತು ಶಂಕರ ರಾಯನಗೌಡ್ರ(29) ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರು, ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದರು. ಮಾಲಾಧಾರಿಗಳೆಲ್ಲ ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲೆಂಡರ್‌ಗೆ ತಾಗಿ ಉರುಳಿದೆ. ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ ಈ ದುರ್ಘಟನೆ ನಡೆಯುವಂತಾಗಿದೆ ಎದು ತಿಳಿದು ಬಂದಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.