ಶ್ರೀಲಂಕಾ : ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಬಡಿದ ದಿತ್ವಾ ಚಂಡಮಾರುತ ವಿನಾಶವನ್ನೇ ಸೃಷ್ಟಿಸಿದೆ. ಈವರೆಗೆ ಅಧಿಕೃತವಾಗಿ 465 ಮಂದಿ ಸಾವಿಗೀಡಾಗಿದ್ದರೆ, 366 ಮಂದಿ ನಾಪತ್ತೆಯಾಗಿದ್ದಾರೆ. ಇದು ಸಾವಿನ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಪ್ರಕೃತಿ ವಿಕೋಪ ಸೃಷ್ಟಿಸಿದ ಅವಾಂತರಕ್ಕೆ 7 ಬಿಲಿಯನ್ ಡಾಲರ್ (ಸುಮಾರು 623 ಕೋಟಿ ರೂಪಾಯಿ) ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರವಾಹದಿಂದ ದೇಶದಲ್ಲಾದ ಅನಾಹುತಗಳ ಬಗ್ಗೆ ಮಾಹಿತಿ ಹಂಚಿಕೊಂಡ ಅಧಿಕಾರಿಯೊಬ್ಬರು, 25 ಜಿಲ್ಲೆಗಳು ದಿತ್ವಾ ಚಂಡಮಾರುತಕ್ಕೆ ತುತ್ತಾಗಿವೆ. 1.4 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದರ ಪರಿಣಾಮ ಎದುರಿಸುತ್ತಿದ್ದಾರೆ. 2,33,000 ಕ್ಕೂ ಹೆಚ್ಚು ಜನರು 1,441 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 6-7 ಬಿಲಿಯನ್ ಡಾಲರ್ನಷ್ಟು ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ. ಇದು ಶೇಕಡಾ 3 ರಿಂದ 5ರಷ್ಟು ದೇಶದ ಜಿಡಿಪಿಯಾಗಿದೆ. ಹಲವಾರು ಜಿಲ್ಲೆಗಳು ತೀವ್ರ ನಲುಗಿವೆ. ಇದರಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ತೀವ್ರವಾಗಿ ಕುಸಿದಿವೆ ಎಂದು ಹೇಳಿದ್ದಾರೆ.

ವಿಪತ್ತು ತಗ್ಗಿದ ನಂತರದ ಕಾರ್ಯವಿಧಾನಗಳನ್ನು ವೇಗಗೊಳಿಸಲು ಹೊಸ ಕಾನೂನು ನಿಬಂಧನೆಗಳು ಬೇಕಾಗುತ್ತವೆ. ಉದಾಹರಣೆಗೆ, ಪ್ರಸ್ತುತ ಕಾನೂನುಗಳ ಅಡಿಯಲ್ಲಿ ಮರಣ ಪ್ರಮಾಣಪತ್ರವನ್ನು ಆರು ತಿಂಗಳ ನಂತರ ಮಾತ್ರ ನೀಡಬಹುದು. ಈ ಅವಧಿಯನ್ನು ಕಡಿಮೆ ಮಾಡಲು ನಾವು ಹೊಸ ಕಾನೂನುಗಳನ್ನು ತರಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.

ಮಧ್ಯ ಗುಡ್ಡಗಾಡು ಜಿಲ್ಲೆಗಳಲ್ಲಿ ಪ್ರಮುಖವಾಗಿ ತರಕಾರಿ ಬೆಳೆಯುವ ಪ್ರದೇಶಗಳು ಭೂಕುಸಿತ ಮತ್ತು ಪ್ರವಾಹದಿಂದ ನಾಶವಾಗಿವೆ. ಬೇರೆಡೆಯಿಂದ ತರಕಾರಿಗಳ ಆಮದಿಗೆ ತಾತ್ಕಾಲಿಕವಾಗಿ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಕ್ಯಾಂಡಿಯಲ್ಲಿ ಅತಿ ಹೆಚ್ಚು 118 ಸಾವುಗಳು ಸಂಭವಿಸಿವೆ. ನಂತರ ನುವಾರ ಎಲಿಯಾದಲ್ಲಿ 89 ಮತ್ತು ಬದುಲ್ಲಾದಲ್ಲಿ 83 ಸಾವುಗಳು ಆಗಿವೆ. ಇವೆಲ್ಲವೂ ಮಧ್ಯ ಗುಡ್ಡಗಾಡು ಪ್ರದೇಶದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರವಾಹದಿಂದ ಮನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವಶೇಷಗಳನ್ನು ತೆರವು ಮಾಡಿಕೊಳ್ಳಲು ಜನರಿಗೆ 25,000 ರೂಪಾಯಿ ನೀಡಲಾಗುತ್ತಿದೆ. ಮಾಲೀಕತ್ವ ಪರಿಶೀಲನೆ ಇಲ್ಲದೆ ವಿತರಿಸಲಾಗುವುದು. ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಮಂಗಳವಾರದ ವೇಳೆಗೆ 783 ಮನೆಗಳು ನಾಶವಾಗಿವೆ. 31,417 ಭಾಗಶಃ ಹಾನಿಗೊಳಗಾಗಿವೆ. ಗುರುವಾರದ ವೇಳೆಗೆ ಎಲ್ಲಾ ಅಸ್ತವ್ಯಸ್ತಗೊಂಡ ಸೇವೆಗಳನ್ನು ಪುನಃಸ್ಥಾಪಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ | ಭಕ್ತರೊಂದಿಗೆ ಆಟವಾಡುತ್ತಿದ್ದಾಗ ಅಡ್ಡಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ!



















