ನವದೆಹಲಿ : ದಿತ್ವಾ ಚಂಡಮಾರುತದಿಂದ ನಲುಗಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ‘ಆಪರೇಷನ್ ಸಾಗರ್ ಬಂಧು’ ಅಡಿ ಮಾನವೀಯ ಸಹಾಯ ಮಾಡಲು ಮುಂದಾಗಿದ್ದು, ಭಾರತೀಯ ವಾಯುಪಡೆಯ ಸಿ-130ಜೆ ವಿಮಾನವು ಸುಮಾರು 12 ಟನ್ ಪರಿಹಾರ ಸಾಮಗ್ರಿಗಳೊಂದಿಗೆ ಕೊಲಂಬೊಗೆ ತೆರಳಿದೆ.
ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ನಲುಗಿದ್ದು, ಚಂಡಮಾರುತದ ಪರಿಣಾಮವಾಗಿ ಹಲವಾರು ಸಾವುಗಳಿಗೆ ಕಾರಣವಾಗಿದೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ಬೆನ್ನಲ್ಲೇ ಶುಕ್ರವಾರ ಭಾರತವು ಶ್ರೀಲಂಕಾಕ್ಕೆ ಅಗತ್ಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.
ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಪ್ರಕಾರ, ಭಾರತೀಯ ನೌಕಾಪಡೆಯ ಹಡಗು ವಿಕ್ರಾಂತ್ ಮತ್ತು ಭಾರತೀಯ ನೌಕಾಪಡೆಯ ಹಡಗು ಉದಯಗಿರಿ ಸಹಾಯದಿಂದ ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪಡಿತರ ಮತ್ತು ಇತರ ಹಲವಾರು ಪ್ರಮುಖ ವಸ್ತುಗಳು ಒದಗಿಸಿದೆ ಸವಾಲಿನ ಕ್ಷಣದಲ್ಲಿ ಭಾರತವು ಶ್ರೀಲಂಕಾದ ಜನರೊಂದಿಗೆ ದೃಢವಾಗಿ ನಿಂತಿದೆ. ನೆರೆಹೊರೆ ಮೊದಲು ನೀತಿಗೆ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಕೇಂದ್ರ ತಿಳಿಸಿದೆ.
ಚಂಡಮಾರುತದ ಪರಿಣಾಮಕ್ಕೆ ಅಪಾರ ಪ್ರಾಣ ಹಾನಿ, ಆಸ್ತಿ ಪಾಸ್ತಿಗೆ ಆಗಿರುವ ನಷ್ಟದ ಕುರಿತು ಪ್ರಧಾನಿ ಮೋದಿ ದುಃಖ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ದಿತ್ವಾ ಚಂಡಮಾರುತದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಸಂತಾಪಗಳು. ಎಲ್ಲ ಪೀಡಿತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ಹತ್ತಿರದ ಕಡಲ ನೆರೆಯವರೊಂದಿಗೆ ಭಾರತವು ಆಪರೇಷನ್ ಸಾಗರ್ ಬಂಧು ಅಡಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಎಚ್ಎಡಿಆರ್ ಬೆಂಬಲವನ್ನು ತುರ್ತಾಗಿ ರವಾನಿಸಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ದಿತ್ವಾ ಚಂಡಮಾರುತದಿಂದ ಶ್ರೀಲಂಕಾ ದ್ವೀಪದ ಜನರು ಸಂಕಷ್ಟಕ್ಕೆ ಸಿಲುಕಿದ್ದು, 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಕನಿಷ್ಠ 130 ಜನರು ಕಣ್ಮರೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ದೃಢಪಡಿಸಿದೆ. 200,000ಕ್ಕೂ ಹೆಚ್ಚು ಜನರು ಈ ವಿಪತ್ತಿನಿಂದ ಬಾಧಿತರಾಗಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಐಟಿ ದಾಳಿ | 100 ಕೋಟಿ ರೂ. ಮೌಲ್ಯದ ಅಕ್ರಮ ವಹಿವಾಟು ಬಯಲು!


















