ಬೆಂಗಳೂರು: ಸೈಬರ್ ಸೆಕ್ಯುರಿಟಿ ತಜ್ಞರ ಕೆಲಸ ಏನಿರುತ್ತದೆ? ಸೈಬರ್ ವಂಚಕರು ಹೇಗೆಲ್ಲ ವಂಚಿಸುತ್ತಾರೆ? ಜನರು ಸೈಬರ್ ವಂಚನೆಗೆ ಸಿಲುಕದಿರಲು ಏನು ಮಾಡಬೇಕು ಎಂಬುದು ಸೇರಿ ಹತ್ತಾರು ರೀತಿಯಲ್ಲಿ ಜಾಗೃತಿಯನ್ನು ಸೈಬರ್ ತಜ್ಞರು ಮೂಡಿಸುತ್ತಾರೆ. ಆದರೆ, ಎಂಥಾ ದುರ್ದೈವ ನೋಡಿ, ಪುಣೆಯಲ್ಲಿ ಸೈಬರ್ ವಂಚಕರು ಸೈಬರ್ ತಜ್ಞರೊಬ್ಬರಿಂದಲೇ ಸುಮಾರು 73 ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ. ಅಲ್ಲಿಗೆ, ಸೈಬರ್ ಎಕ್ಸ್ ಪರ್ಟ್ ಕೂಡ ಸೈಬರ್ ವಂಚಕರ ಜಾಲಕ್ಕೆ ಸಿಲುಕಿದಂತೆ ಆಗಿದೆ.

ಖಾಸಗಿ ಕಂಪನಿಯಲ್ಲಿ ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್ ಆಗಿರುವ ವ್ಯಕ್ತಿಯು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ರಿಟರ್ನ್ಸ್ ಲಭಿಸುವಂತೆ ಮಾಡುತ್ತೇವೆ ಎಂದು ಹೇಳಿದ ವಂಚಕರ ಮಾತು ಕೇಳಿ ಅವರ ಖಾತೆಗಳಿಗೆ 73.69 ಲಕ್ಷ ರೂಪಾಯಿಯನ್ನು ಜಮೆ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣದ ಜತೆಗೆ ಲಾಭದ ಹಣವನ್ನು ವಿತ್ ಡ್ರಾ ಮಾಡಲು ಹೋದಾಗಲೇ ಅವರಿಗೆ ತಾವು ವಂಚನೆಗೀಡಾಗಿರುವುದು ಗೊತ್ತಾಗಿದೆ. ಈಗ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚನೆಗೀಡಾಗಿದ್ದು ಹೇಗೆ?
ಸೈಬರ್ ವಂಚಕರು ಸೈಬರ್ ಸೆಕ್ಯುರಿಟಿಯನ್ನು ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿದ್ದಾರೆ. ನೀವು ಈಗ ಟ್ರೇಡಿಂಗ್ ಆ್ಯಪ್ ನಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ ದುಪ್ಪಟ್ಟಾಗುತ್ತದೆ ಎಂಬುದಾಗಿ ಆಸೆ ಹುಟ್ಟಿಸಿದ್ದಾರೆ. ತಾವೊಬ್ಬ ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್ ಎಂಬುದನ್ನೂ ಮರೆತು ವಂಚಕರು ಹೇಳಿದ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಹೀಗೆ ಕೆಲ ದಿನಗಳ ಹೂಡಿಕೆ ಬಳಿಕ ವಂಚನೆ ಬಗ್ಗೆ ಎಕ್ಸ್ ಪರ್ಟ್ ಗೆ ಗೊತ್ತಾಗಿದೆ.
ಸೈಬರ್ ತಜ್ಞರು ಆಗಸ್ಟ್ 8ರಿಂದ ಅಕ್ಟೋಬರ್ 1ರ ಅವಧಿಯಲ್ಲಿ ವಂಚಕರು ಹೇಳಿದ ಖಾತೆಗಳಿಗೆ 55 ಬಾರಿ ಹಣ ಕಳುಹಿಸಿದ್ದಾರೆ. ಹೀಗೆ ಅವರು ಹೇಳಿದಾಗಲೆಲ್ಲ ಕಳುಹಿಸಿದ ಹಣವೇ 73.69 ಲಕ್ಷ ರೂಪಾಯಿ ಆಗಿದೆ. ವಂಚಕರು ಹೇಳಿದ ಆ್ಯಪ್ ನಲ್ಲಿ ವ್ಯಕ್ತಿ ಮಾಡಿದ ಹೂಡಿಕೆ ಸೇರಿ ಒಟ್ಟು 2.33 ಕೋಟಿ ರೂ. ಲಾಭವಾಗಿದೆ ಎಂಬುದಾಗಿ ತೋರಿಸಿದೆ. ಇದರಿಂದ ಖುಷಿಯಾದ ವ್ಯಕ್ತಿಯು ಹಣ ವಿತ್ ಡ್ರಾ ಮಾಡಲು ಹೋಗಿದ್ದಾರೆ. ಆದರೆ ಆಗ ಹಣ ವಿತ್ ಡ್ರಾ ಆಗಿಲ್ಲ. ವಂಚಕರಿಗೆ ಕರೆ ಮಾಡಿದರೆ ಕರೆ ರೀಚ್ ಆಗಿಲ್ಲ. ಇದಾದ ಬಳಿಕವೇ ವ್ಯಕ್ತಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.