ಕಾಲ್ ಸೆಂಟರ್ ಹೆಸರಿನಲ್ಲಿ ಸೈಬರ್ ಕ್ರೈಂ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೊರಗೆ ಇಂಟೀರಿಯರ್ಸ್ ಬೋರ್ಡ್ ಹಾಕಿಕೊಂಡು ಒಳಗೆ ಆರೋಪಿಗಳು ಸೈಬರ್ ಕ್ರೈಂ ನಡೆಸುತ್ತಿದ್ದರು. ಹೀಗೆ ಕಾಲ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹುಳಿಮಾವು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿತ್ತು. ಹುಳಿಮಾವು ಬಸ್ ನಿಲ್ದಾಣದ ಬಳಿ ಕಾಲ್ ಸೆಂಟರ್ ಗೆಂದು ಗ್ಯಾಂಗ್ ಬಾಡಿಗೆ ಪಡೆದಿತ್ತು. ಫೀನಿಕ್ಸ್ ಇಂಟೀರಿಯರ್ಸ್ ಎಂದು ಹೊರಗೆ ಬೋರ್ಡ್ ಹಾಕಿಕೊಂಡು ಒಳಗೆ ಸೈಬರ್ ಕ್ರೈಂ ಮಾಡುತ್ತಿತ್ತು.
ಸದ್ಯ ದಾಳಿ ನಡೆಸಿರುವ ಪೊಲೀಸರು ಕಿಂಗ್ ಪಿನ್ ಜೀತೇಂದ್ರ ಅಲಿಯಾಸ್ ಜೀತು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಕಳೆದ ನಾಲ್ಕು ತಿಂಗಳಿನಿಂದ ಈ ದಂಧೆ ನಡೆಸುತ್ತಿತ್ತು ಎನ್ನಲಾಗಿದೆ.
ಬಂಧಿತ ಕಿಂಗ್ ಪಿನ್ ಸೈಬರ್ ವಂಚನೆ ಮಾಡುವುದಕ್ಕೆ ಸುಮಾರು 20ಕ್ಕೂ ಅಧಿಕ ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ. ಸಾವಿರಾರು ಪೋನ್ ನಂಬರ್ ಗಳ ಲಿಸ್ಟ್ ಇಟ್ಟುಕೊಂಡಿದ್ದ. ಪೋನ್ ಮಾಡಿ ನಿಮ್ಮ ಕೆವೈಸಿ ಅಪ್ಟೇಡ್, ಒಟಿಪಿ ಲಿಂಕ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ಚೇಂಜ್ ಮಾಡುವುದಾಗಿ ಹೇಳಿ ಹಾಗೂ ಶೇರ್ ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ನೀಡುವುದಾಗಿ ಹೇಳುತ್ತಿದ್ದ ಗ್ಯಾಂಗ್ ವಂಚಿಸುತ್ತಿತ್ತು. ಗ್ರೂಪ್ ಕ್ರಿಯೆಟ್ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಆಸಾಮಿಗಳು ಹಾಕಿಸಿಕೊಳ್ಳುತ್ತಿದ್ದರು. ಹೀಗೆ ಎಸ್ ಎಮ್ ಎಸ್, ಪೋನ್ ಕಾಲ್ ಗಳ ಮೂಲಕ ಕೋಟಿ ಕೋಟಿ ವಂಚನೆ ಮಾಡುತ್ತಿದ್ದರು.
ಈ ಗ್ಯಾಂಗ್ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದೆ ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.