ಬೆಂಗಳೂರು: ಕರ್ನಾಟಕದ ಕಲಬುರಗಿಯಲ್ಲಿರುವ, ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕು ಎಂದು ಬಯಸುವವರಿಗೆ ಸಿಹಿ ಸುದ್ದಿ ದೊರೆತಿದೆ. 2026-27ನೇ ಸಾಲಿನಲ್ಲಿ ವಿವಿಧ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ ಎಂದು ವಿಶ್ವವಿದ್ಯಾಲಯವು ಮಾಹಿತಿ ನೀಡಿದೆ.
ಡಿಸೆಂಬರ್ 14ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು 2026ರ ಜನವರಿ 14ರವರೆಗೆ ಅರ್ಜಿ ಸಲ್ಲಿಸಬಹುದು. ಸ್ನಾತಕ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಈಗಾಗಲೇ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿದ್ದಾರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಮಾಹಿತಿ ನೀಡಿದೆ.
ಕೇಂದ್ರೀಯ ವಿಶ್ವವಿದ್ಯಾಲಯವು ಎಂ.ಎ (ಕನ್ನಡ, ಇಂಗ್ಲಿಷ್, ಹಿಂದಿ, ಅರ್ಥಶಾಸ್ತ್ರ, ಇತಿಹಾಸ), ಎಂ.ಎಸ್ಸಿ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ), ಎಂ.ಕಾಂ, ಎಂ.ಬಿ.ಎ, ಎಂ.ಟೆಕ್, ಬಿ.ಎಡ್ ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ವಿಷಯಗಳಲ್ಲಿ ಪ್ರವೇಶಾವಕಾಶ ಕಲ್ಪಿಸಿದೆ. ಈ ಬಾರಿ ಹೊಸದಾಗಿ ಕೆಲವು ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಒಟ್ಟು 157 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದೆ.
ಕಲಬುರಗಿ ಮಾತ್ರವಲ್ಲದೆ ಬೇರೆಡೆಯೂ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ. ಕಲಬುರಗಿ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಯಲಿದೆ. ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರಲಿವೆ. ಅರ್ಜಿ ಸಲ್ಲಿಸಲು ಬಯಸುವವರು https://exams.nta.nic.in/cuet-pg ಅಥವಾ www.cuk.ac.in ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ಮೊದಲ ಚಾಲಕರಹಿತ ಪಿಂಕ್ ಮೆಟ್ರೋ | ಸಂಚಾರ ಆರಂಭ ಯಾವಾಗ?



















