ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಕಾರಣಕ್ಕೆ ಶಾಸಕ ಸಿ.ಟಿ. ರವಿ ಅರೆಸ್ಟ್ ಆಗಿ ಬಿಡುಗಡೆಯಾಗಿದ್ದಾರೆ. ಈಗ ಈ ಸಂಘರ್ಷ ರಾಜ್ಯಪಾಲರ ಅಂಗಳ ತಲುಪಿದೆ.
ಇಂದು ಸಿ.ಟಿ. ರವಿ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. 8 ಪುಟಗಳ ದೂರು ನೀಡಿದ್ದು, ತಮ್ಮ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಡಿಜಿ ಮತ್ತು ಐಜಿಪಿಯಿಂದ ಸ್ಪಷ್ಟನೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ನೀಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರಪತಿ, ಕೇಂದ್ರ ಗೃಹ ಇಲಾಖೆ ಗಮನಕ್ಕೂ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದು, ದೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಮಾಡಿವುದಾಗಿ ಧಮ್ಕಿ ಹಾಕಿದ್ದು, ಅವರ ಬೆಂಬಲಿಗರಿಂದ ಫೇಕ್ ಎನ್‌ಕೌಂಟರ್ ಸಂಚು ಆರೋಪ ಮಾಡಿದ್ದಾರೆ. ದೂರಿನಲ್ಲಿ ಫೇಕ್ ಎನ್‌ಕೌಂಟರ್ ವಿಚಾರ ಪ್ರಸ್ತಾಪಿಸಿರುವ ಸಿ.ಟಿ.ರವಿ, ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಪೊಲೀಸರು ಸುಪಾರಿ ಕಿಲ್ಲರ್ ರೀತಿ ವರ್ತಿಸಿದರು. ನಿಗೂಢ ಸ್ಥಳಗಳಿಗೆ ಕರೆದೊಯ್ದು ಫೇಕ್ ಎನ್‌ಕೌಂಟರ್ ಮಾಡಲು ಸಂಚು ರೂಪಿಸಿದ್ದರು.
ಪೊಲೀಸರು ಸುವರ್ಣಸೌಧದೊಳಗೆ ಪ್ರವೇಶ ಮಾಡಿ ಬಂಧಿಸಿದ್ದು, ಅಕ್ರಮವಾಗಿದೆ ಹಾಗೂ ನನ್ನ ಹಕ್ಕು ಚ್ಯುತಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.