ತಮಿಳುನಾಡು: ಚೆನ್ನೈ ಸೂಪರ್ ಕಿಂಗ್ಸ್ ಅಂದರೆ ಧೋನಿ. ಧೋನಿ ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಬರೋಬ್ಬರಿ 17 ಆವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಈಗ 18ನೇ ಆವೃತ್ತಿಗೆ ಸಜ್ಜಾಗಿ ನಿಂತಿದ್ದಾರೆ. ಐದು ಬಾರಿ ತಂಡಕ್ಕೆ ಕಪ್ ಗೆಲ್ಲಿಸಿ ಕೊಟ್ಟಿದ್ದಾರೆ. ಈ ಮಧ್ಯೆ ಧೋನಿ ಬಗ್ಗೆ ತಂಡದ ಸಿಇಓ ಮಾತನಾಡಿದ್ದಾರೆ.
ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಅನ್ ಕ್ಯಾಪ್ಡ್ ಪ್ಲೇಯರ್ ಪಟ್ಟಿಯಡಿ 4 ಕೋಟಿ ರೂ.ಗೆ ಸಿಎಸ್ ಕೆಯಲ್ಲಿ ಧೋನಿ ಉಳಿದುಕೊಂಡಿದ್ದಾರೆ. ಹೀಗಾಗಿ 18ನೇ ಆವೃತ್ತಿಯಲ್ಲಿ ತಂಡಕ್ಕೋಸ್ಕರ ಮತ್ತು ಅಭಿಮಾನಿಗಳಿಗಾಗಿ ಆಡಲು ಧೋನಿ ನಿರ್ಧರಿಸಿದ್ದಾರೆ ಎನ್ನುವಂತಾಯಿತು. ಈ ವಿಷಯ ಗೊತ್ತಾಗ್ತಿದ್ದಂತೆ ಅವರ ಫ್ಯಾನ್ಸ್ಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ತಮ್ಮ ನೆಚ್ಚಿನ ‘ಕ್ಯಾಪ್ಟನ್ ಕೂಲ್’ರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡುವ ಭಾಗ್ಯ ದೊರಕಿತು ಎಂದು ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ಈ ವಿಷಯವಾಗಿ ಈಗ ಫ್ರಾಂಚೈಸಿಯ ಸಿಇಓ ಕಾಶಿ ವಿಶ್ವನಾಥನ್ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಯಾವ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂಬುವುದನ್ನು ರಿಟೆನ್ಶನ್ ಪ್ರಕ್ರಿಯೆಗೂ ಮುನ್ನ ನಿಖರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಹಾಗೂ ತಂಡದಲ್ಲಿ ಒಗ್ಗಟು, ಆಟಗಾರರಲ್ಲಿ ಉತ್ಸಾಹ ತುಂಬುವ ಶಕ್ತಿಯಾಗಿರುವ ಎಂಎಸ್ ಧೋನಿ ಅವರನ್ನು ಐಪಿಎಲ್ 2025ರ ಹರಾಜಿಗೆ ಕಳಿಸದೆ, ಫ್ರಾಂಚೈಸಿ ಅನ್ಕ್ಯಾಪ್ಡ್ ಪ್ಲೇಯರ್ ಪಟ್ಟಿಯಡಿ ಅವರನ್ನು ಉಳಿಸಿಕೊಂಡಿತು. ನಂತರ ರುತುರಾಜ್ ಗಾಯಕ್ವಾಡ್ (18 ಕೋಟಿ ರೂ.), ರವೀಂದ್ರ ಜಡೇಜಾ (18 ಕೋಟಿ ರೂ.), ಮತೀಶಾ ಪತಿರಾಣ (13 ಕೋಟಿ ರೂ.) ಮತ್ತು ಶಿವಂ ದುಬೆರನ್ನು (12ಕೋಟಿ ರೂ.) ಉಳಿಸಿಕೊಂಡಿತು. ಎಲ್ಲರಿಗೂ ಗೊತ್ತಿರುವಂತೆ ಮಾಹಿ ಎಲ್ಲವನ್ನೂ ಹಂಚಿಕೊಳ್ಳುವುದಿಲ್ಲ. ಹೀಗಾಗಿ ಈ ವಿಷಯವನ್ನೇ ಅವರೇ ಖುದ್ದಾಗಿ ಹೇಳುವವರೆಗೂ ನಾವು ಯಾರೊಂದಿಗೂ ಈ ವಿಷಯ ಹಂಚಿಕೊಳ್ಳುವುದಿಲ್ಲ.
ಸಿಎಸ್ಕೆ ಪರ ಆಡುತ್ತೇನೆ ಎಂದು ನಿರ್ಧರಿಸಿ ಬಂದಿರುವುದು ನಿಜಕ್ಕೂ ಖುಷಿಯ ಸಂಗತಿ ಹಾಗೂ ಸ್ವಾಗತಾರ್ಹ. ಈ ಹಿಂದೆಯೇ ಅವರು ಹೇಳಿರುವಂತೆ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸಿದ್ದಾರೆ. ಅದರಂತೆಯೇ ನಾವು ಕೂಡ ಅದಕ್ಕೆ ಹೆಚ್ಚು ಒತ್ತು ನೀಡಲಿದ್ದೇವೆ. ಎಲ್ಲಿಯವರೆಗೂ ಕ್ಯಾಪ್ಟನ್ ಕೂಲ್ಗೆ ಚೆನ್ನೈನಲ್ಲಿ ಆಡಬೇಕು ಅನಿಸುತ್ತದೆಯೋ, ಅಲ್ಲಿಯವರೆಗೂ ಅವರು ಆಡಬಹುದು. ನಮ್ಮ ನಿರ್ಬಂಧವಿಲ್ಲ ಎಂದಿದ್ದಾರೆ. ಈ ಮಾತು ಕೇಳಿ ಈಗ ಮಾಹಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.