ವಾಯುವ್ಯ ಕಾಂಗೋದ ಈಕ್ವೆಟರ್ ಪ್ರಾಂತ್ಯದಲ್ಲಿ ನಿಗೂಢ ರೋಗ ಪತ್ತೆಯಾಗಿದ್ದು, ಅಳುವ ರೋಗಕ್ಕೆ ಸುಮಾರು 50 ಜನ ಸಾವನ್ನಪ್ಪಿದ್ದಾರೆ. ರೋಗದ ಲಕ್ಷಣ ಕಂಡು ಬಂದ ಕೆಲವೇ ಗಂಟೆಗಳಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಈ ಲಕ್ಷಣ ಕಂಡ ಬಂದವರಲ್ಲಿ ಅಳುವುದು ಪ್ರಮುಖ ಲಕ್ಷಣವಾಗಿದೆ.
ಈಕ್ವೆಟರ್ ಪ್ರಾಂತ್ಯದ ಹಳ್ಳಿಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಆರೋಗ್ಯ ಅಧಿಕಾರಿಗಳು 419 ಪ್ರಕರಣಗಳು ಮತ್ತು 53 ಸಾವುಗಳನ್ನು ವರದಿ ಮಾಡಿದ್ದಾರೆ. ಬಾವಲಿ ತಿಂದ 48 ಗಂಟೆಗಳ ಒಳಗೆ ಮೂರು ಮಕ್ಕಳು ಸಾವನ್ನಪ್ಪಿದ್ದರು. ಬೊಮೊಟೆಯಲ್ಲಿ, 400 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಪೈಕಿ ಹಲವರಿಗೆ ಮಲೇರಿಯಾ ಪತ್ತೆಯಾಗಿದೆ.
ಶೇ. 80ರಷ್ಟು ರೋಗಿಗಳು ಜ್ವರ, ಶೀತ, ಮೈಕೈ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಕಾಂಗೋದ ಆರೋಗ್ಯ ಸಚಿವಾಲಯ ತಿಳಿಸಿದೆ. ಕುತ್ತಿಗೆ ಮತ್ತು ಕೀಲು ನೋವು, ಬೆವರು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿವೆ. 59 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರ ಬಾಯಾರಿಕೆ, ಮಕ್ಕಳಲ್ಲಿ ನಿರಂತರ ಅಳುವ ಲಕ್ಷಣಗಳು ಕಾಣಿಸಿಕೊಂಡಿವೆ.
ಮಲೇರಿಯಾ, ವೈರಲ್ ಹೆಮರಾಜಿಕ್ ಜ್ವರ, ಆಹಾರ ಅಥವಾ ಕಲುಷಿತ ನೀರು, ಟೈಫಾಯಿಡ್ ಜ್ವರ ಮತ್ತು ಮೆನಿಂಜೈಟಿಸ್ ಸೇರಿದಂತೆ ಇತರ ಸಂಭಾವ್ಯ ಕಾರಣಗಳನ್ನು WHO ಈಗ ತನಿಖೆ ಮಾಡುತ್ತಿದೆ.