ಹಾಸನ : ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ 22 ವರ್ಷದ ವರುಣ್ ಎಂಬ ಯುವಕನನ್ನು 8 ಮಂದಿ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಣಕಾಸು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ವರುಣ್ ಅನ್ನು ಕರೆದೊಯ್ದು ಮೊದಲು ಹಲ್ಲೆ ನಡೆಸಿ, ನಂತರ ತೋಟದ ಮನೆಯಲ್ಲಿ ಬಂಧಿಸಿ ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಶವವನ್ನು ಸಂಪೂರ್ಣವಾಗಿ ಸುಟ್ಟು ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ.
ಮಾರ್ಚ್ 10ರಿಂದ ವರುಣ್ ಕಾಣೆಯಾಗಿದ್ದು, ಮಾರ್ಚ್ 15ರಂದು ಅವರ ತಾಯಿ ಕಲಾವತಿ ಗಂಡಸಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಘಟನೆ ಹತ್ಯೆಯಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಗಜ ಅಲಿಯಾಸ್ ಪ್ರಜ್ವಲ್ ಹಾಗೂ ಪೃಥ್ವಿಕ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆ ವೇಳೆ ವರುಣ್ ಜೊತೆಯಲ್ಲಿದ್ದ ಸ್ನೇಹಿತ ಲೋಹಿತ್ ಮೇಲೂ ದಾಳಿ ನಡೆದಿದ್ದು, ಆತ ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ನಂತರ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ಆರೋಪಿಗಳು, ಶವವನ್ನು ಅರಸೀಕೆರೆಯ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಲ್ಲಿ ಸುಟ್ಟು ಹಾಕಿದ್ದಾರೆ. ಈ ಸಂಬಂಧ ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 19ರಂದು ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ : ಸಾವಿನ ದವಡೆಯಿಂದ ಬೈಕ್ ಸವಾರರು ಜಸ್ಟ್ ಮಿಸ್..!



















