ಹಾಸನ : ಎಟಿಎಂಗೆ ಹಾಕಬೇಕಿದ್ದ ಕೋಟ್ಯಾಂತರ ರೂಪಾಯಿ ಹಣ ನಾಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಸಿಬ್ಬಂದಿ ವಿರುದ್ಧವೇ ಈಗ ಹಣ ಲಪಟಾಯಿಸಿರುವ ಆರೋಪ ಕೇಳಿಬಂದಿದೆ.
ಎಟಿಎಂಗಳಿಗೆ (ATM) ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು (Money) ತಾವೇ ಲಪಟಾಯಿಸಿ ಕಂಪನಿಗೆ ಸುಳ್ಳು ಲೆಕ್ಕ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಂಪನಿ ಸಿಬ್ಬಂದಿ ನಂದೀಶ್ ಹಾಗೂ ಮಧು ವಿರುದ್ಧ ಈ ಆರೋಪ ಕೇಳಿಬಂದಿದೆ.
ಹಾಸನ ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಶ್ ಮ್ಯಾನೆಜ್‍ಮೆಂಟ್ ಸರ್ವಿಸಸ್ (CMS) ಕಚೇರಿಯಲ್ಲೇ ಈ ಆರೋಪ ಕೇಳಿಬಂದಿದೆ. ಈ ಎಜೆನ್ಸಿ 15 ಬ್ಯಾಂಕ್‍ಗಳ 28 ಎಟಿಎಂಗಳಿಗೆ ಹಣ ಹಾಕುತ್ತಿತ್ತು. ಫೆ.6 ರಂದು ಎಟಿಎಂಗಳಿಗೆ ಸಿಬ್ಬಂದಿಗಳು ಸರಿಯಾಗಿ ಹಣ ಹಾಕಿರುವುದು ಆಡಿಟ್ ವರದಿಯಲ್ಲಿ ಲಭ್ಯವಾಗಿತ್ತು.
ಫೆ.18 ರಂದು ಮತ್ತೆ ಆಡಿಟ್ ಮಾಡಿದಾಗ ಕೋಟ್ಯಂತರ ರೂ. ವ್ಯತ್ಯಾಸ ಬಂದಿದೆ. ಅಂದಾಜು 2 ಕೋಟಿಗೂ ಹೆಚ್ಚು ಹಣ ಗೋಲ್ಮಾಲ್ ಆಗಿರುವುದು ಬೆಳಕಿಗೆ ಬಂದಿದೆ. ನಂದೀಶ್ ಹಾಗೂ ಮಧು ಎಂಬುವವರು ಎಟಿಎಂಗಳಿಗೆ ಹಣ ಹಾಕಲು ತೆರಳಿದ್ದ ವೇಳೆ ಹಣ ಹಾಕದೆ, ಬರೀ ಎಂಟ್ರಿ ಮಾಡಿ ದುಡ್ಡು ಹೊಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸದ್ಯ ಆಡಿಟ್ ಕಾರ್ಯ ನಡೆಯುತ್ತಿದ್ದು, ಸಿಬ್ಬಂದಿಯೇ ಹಣ ಲಪಟಾಯಿಸಿರುವುದು ಕಂಡು ಬಂದರೆ ಪೊಲೀಸರಿಗೆ ದೂರು ನೀಡಲು ಎಜೆನ್ಸಿ ಮುಂದಾಗಿದೆ.
ಇದನ್ನೂ ಓದಿ : ಐರ್ಲೆಂಡ್‌ನಲ್ಲಿ ಕನ್ನಡಿಗ ನಿಗೂಢವಾಗಿ ಸಾ*ವು



















